ಈ ಬಾರಿಯ ಒಲಿಂಪಿಕ್ಸ್ ಅನ್ನು ಪ್ಯಾರಿಸ್ ಆಯೋಜಿಸುತ್ತಿದೆ. ಇದೇ ತಿಂಗಳ 26ರಿಂದ ಆಗಸ್ಟ್ 11ರವರೆಗೆ ಪ್ಯಾರಿಸ್ ಒಲಿಂಪಿಕ್ಸ್ ನಡೆಯಲಿದೆ. ಈ ಜಾಗತಿಕ ಟೂರ್ನಿಗಾಗಿ ಕ್ರೀಡಾಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಭಾರತದಿಂದ 100ಕ್ಕೂ ಹೆಚ್ಚು ಕ್ರೀಡಾಪಟುಗಳ ತಂಡ ಈ ಟೂರ್ನಿಗೆ ತೆರಳುತ್ತಿದೆ. ಒಲಿಂಪಿಕ್ಸ್‌ನಲ್ಲಿ ಅತಿ ಹೆಚ್ಚು ಚಿನ್ನದ ಪದಕಗಳನ್ನು ಗೆದ್ದ ಶ್ರೇಷ್ಠ ಒಲಿಂಪಿಯನ್ ಯಾರು ಗೊತ್ತಾ? ಇವರ ಬಳಿಯಿದೆ ಕೋಟಿಗಟ್ಟಲೆ ಆಸ್ತಿ.
ಅತ್ಯಂತ ಯಶಸ್ವಿ ಒಲಿಂಪಿಯನ್…
ಅಮೆರಿಕದ ಮಾಜಿ ಈಜುಗಾರ ಮೈಕೆಲ್ ಫೆಲ್ಪ್ಸ್ ವಿಶ್ವದ ಅತ್ಯಂತ ಯಶಸ್ವಿ ಒಲಿಂಪಿಯನ್. ಈ ಟೂರ್ನಿಯಲ್ಲಿ ಅತಿ ಪದಕಗಳನ್ನು ಗೆದ್ದ ವಿಶ್ವದಾಖಲೆ ಹೊಂದಿದ್ದಾರೆ. ಎಂಟು ಬಾರಿ ಮೈಕೆಲ್ ವಿಶ್ವ ಈಜುಗಾರ ಪ್ರಶಸ್ತಿಯನ್ನು ಮತ್ತು 11 ಬಾರಿ ಅಮೆರಿಕನ್ ಸ್ವಿಮ್ಮರ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
23 ಚಿನ್ನ ಮತ್ತು 39 ವಿಶ್ವ ದಾಖಲೆ…
ಮೈಕಲ್ ಫೆಲ್ಪ್ಸ್ ಒಲಿಂಪಿಕ್ಸ್‌ನಲ್ಲಿ ಗರಿಷ್ಠ 23 ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ಅಷ್ಟೇ ಅಲ್ಲ ಒಲಿಂಪಿಕ್ಸ್‌ನಲ್ಲಿ ಗರಿಷ್ಠ 28 ಪದಕಗಳನ್ನು ಗೆದ್ದ ಅಥ್ಲೀಟ್ ಕೂಡ. ಫೆಲ್ಪ್ಸ್ 39 ವಿಶ್ವ ದಾಖಲೆಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.
ಅಥೆನ್ಸ್‌ನಲ್ಲಿ ನಡೆದ 2004ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಮೈಕೆಲ್ ಫೆಲ್ಪ್ಸ್ 6 ಚಿನ್ನ ಮತ್ತು 2 ಕಂಚಿನ ಪದಕಗಳನ್ನು ಗೆದ್ದರು. ಜಿಮ್ನಾಸ್ಟ್ ಅಲೆಕ್ಸಾಂಡರ್ ಡೆಟಿಯಾಟಿನ್ ಅವರ ಒಂದೇ ಕ್ರೀಡಾಕೂಟದಲ್ಲಿ ಯಾವುದೇ ಬಣ್ಣದ ಎಂಟು ಪದಕಗಳ ದಾಖಲೆಯನ್ನು ಸರಿಗಟ್ಟಿದರು. ನಾಲ್ಕು ವರ್ಷಗಳ ನಂತರ 2008ರ ಬೀಜಿಂಗ್ ಕ್ರೀಡಾಕೂಟದಲ್ಲಿ ಮೈಕೆಲ್ ಫೆಲ್ಫ್ಸ್ 8 ಚಿನ್ನದ ಪದಕಗಳನ್ನು ಗೆದ್ದಿದ್ದರು.
2016ರಲ್ಲಿ ನಿವೃತ್ತಿ…
ಫೆಲ್ಪ್ಸ್ 2012ರ ಒಲಿಂಪಿಕ್ಸ್ ನಂತರ ನಿವೃತ್ತಿ ಪಡೆದಿದ್ದರು. ಆದರೆ 2014ರ ಏಪ್ರಿಲ್‌ನಲ್ಲಿ ಮತ್ತೆ ಕಮ್‌ಬ್ಯಾಕ್ ಮಾಡಿದ್ರು. 2016ರ ಆಗಸ್ಟ್‌ನಲ್ಲಿ ಈ ಚಿನ್ನದ ಮೀನು ನಿವೃತ್ತಿ ಘೋಷಿಸಿತ್ತು. 2017ರಲ್ಲಿ ಲಾರೆಸ್ ವರ್ಲ್ಡ್ ಕಮ್‌ಬ್ಯಾಕ್ ಆಫ್ ದಿ ಇಯರ್ ಪ್ರಶಸ್ತಿ ಅವರದಾಗಿತ್ತು. ಮೈಕೆಲ್ ಫೆಲ್ಪ್ಸ್ ಜಗತ್ತಿನ ಶ್ರೇಷ್ಠ ಈಜುಗಾರ.
ಇವರು ಮಾಜಿ ಮಿಸ್ ಕ್ಯಾಲಿಫೋರ್ನಿಯಾ USA ನಿಕೋಲ್ ಜಾನ್ಸನ್ ಅವರನ್ನು ವಿವಾಹವಾಗಿದ್ದಾರೆ. ಸಾಕಷ್ಟು ಬಾರಿ ಇಬ್ಬರೂ ದೂರವಾಗಿ ಮತ್ತೆ ಒಂದಾಗಿದ್ದಾರೆ. ಈ ದಂಪತಿಗೆ ನಾಲ್ವರು ಗಂಡು ಮಕ್ಕಳಿದ್ದಾರೆ. ಮೈಕೆಲ್ ಫೆಲ್ಪ್ಸ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಈಜುಗಾರ. ಫೆಲ್ಪ್ಸ್ ಕೋಟಿಗಟ್ಟಲೆ ಆಸ್ತಿಯ ಒಡೆಯ. ಅವರ ನಿವ್ವಳ ಮೌಲ್ಯ 800 ಕೋಟಿ ರೂಪಾಯಿ ಎಂದು ಹೇಳಲಾಗ್ತಿದೆ.