ತಿರುವನಂಪುರಂ: 21 ವರ್ಷದ ಬಿಎಸ್ಸಿ ವಿದ್ಯಾರ್ಥಿನಿ ಆರ್ಯಾ ರಾಜೇಂದ್ರನ್ ತಿರುವನಂತಪುರಂ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಅತಿ ಕಿರಿಯ ವಯಸ್ಸಿನ ಮೇಯರ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.
ಸಿಪಿಎಂ ಪಕ್ಷದ ಅಭ್ಯರ್ಥಿಯಾಗಿದ್ದ ಆರ್ಯಾ ರಾಜೇಂದ್ರನ್ ಅವರು ಮುದನ್ಮುಗಲ್ ವಾರ್ಡ್ ನಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದು, ಯುಡಿಎಫ್ ಅಭ್ಯರ್ಥಿ ಶ್ರೀಕಾಲ್ ಅವರನ್ನು 2872 ಮತಗಳಿಂದ ಪರಾಭವಗೊಳಿಸಿದ್ದಾರೆ. ಜಿಲ್ಲೆಯಲ್ಲಿಯೇ ಅತ್ಯಂತ ಕಿರಿಯ ವಯಸ್ಸಿನ ಅಭ್ಯರ್ಥಿಯಾಗಿದ್ದ ಅವರು ಚುನಾಯಿತರಾಗಿದ್ದಲ್ಲದೇ, ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ತಿರುವನಂತಪುರಂನ ಆಲ್ ಸೇಂಟ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಗಣಿತ ವಿದ್ಯಾರ್ಥಿನಿಯಾಗಿದ್ದ ಅವರು ಸಿಪಿಎಂ ವಿದ್ಯಾರ್ಥಿ ಘಟಕದ ರಾಜ್ಯ ಪದಾಧಿಕಾರಿಯಾಗಿದ್ದಾರೆ. ಸಿಪಿಎಂ ಶಾಖಾ ಸಮಿತಿ ಸದಸ್ಯೆ ಕೂಡ ಆಗಿರುವ ಅವರು ಎಲೆಕ್ಟ್ರಿಷಿಯನ್ ರಾಜೇಂದ್ರನ್ ಮತ್ತು ಎಲ್ಐಸಿ ಏಜೆಂಟ್ ಶ್ರೀಲತಾ ಪುತ್ರಿಯಾಗಿದ್ದಾರೆ.
ಮೇಯರ್ ಹುದ್ದೆಗೆ ಆಯ್ಕೆ ಮಾಡಲು ನಡೆದ ಪಕ್ಷದ ನಾಯಕರ ಸಭೆಯಲ್ಲಿ ಹಲವು ಹಿರಿಯ ಸದಸ್ಯರ ಹೆಸರು ಕೇಳಿಬಂದಿದ್ದು, ಯುವಕರಿಗೆ ಆದ್ಯತೆ ನೀಡುವ ಉದ್ದೇಶದಿಂದ ಆರ್ಯಾ ಅವರನ್ನೇ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ.
ನಾನೀಗ ಕೌನ್ಸಿಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ. ಮಹಿಳೆಯರ ಸಮಸ್ಯೆ ನಿವಾರಣೆ ಮತ್ತು ಇತರೆ ಅಭಿವೃದ್ಧಿ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸುವ ವಿಶ್ವಾಸವಿದೆ ಎಂದು ಮೇಯರ್ ಹುದ್ದೆಗೆ ಆಯ್ಕೆಯಾಗಿರುವ ಆರ್ಯಾ ರಾಜೇಂದ್ರನ್ ತಿಳಿಸಿದ್ದಾರೆ.