ಉತ್ತರ ಪ್ರದೇಶದಲ್ಲಿ ಏಪ್ರಿಲ್ ತಿಂಗಳಲ್ಲಿ ನಡೆದ ಪಂಚಾಯಿತಿ ಚುನಾವಣೆಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದ ಸರ್ಕಾರಿ ಅಧಿಕಾರಿಗಳಲ್ಲಿ 2097 ಮಂದಿ ಕೋವಿಡ್ 19ನಿಂದ ಸಾವನ್ನಪ್ಪಿದ್ದಾರೆ ಇದರಲ್ಲಿ ಹೆಚ್ಚಿನವರು ಶಿಕ್ಷಕರೇ ಆಗಿದ್ದಾರೆ ಎಂಬ ಆಘಾತಕಾರಿ ಮಾಹಿತಿಯೊಂದು ಬಯಲಾಗಿದೆ.
ನಾಲ್ಕು ಹಂತಗಳಲ್ಲಿ ಆಯೋಜನೆಗೊಂಡಿದ್ದ ಚುನಾವಣೆಯು ಏಪ್ರಿಲ್ 15ರಿಂದ 29ರವರೆಗೆ ನಡೆದಿತ್ತು. ಮೇ 2ರಂದು ಮತ ಎಣಿಕೆ ಕಾರ್ಯ ನಡೆಸಲಾಗಿತ್ತು.
ಪಂಚಾಯತ್ ರಾಜ್ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮನೋಜ್ ಕುಮಾರ್ ಸಿಂಗ್ ಈ ಮಾಹಿತಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ರವಾನೆ ಮಾಡಿದ್ದಾರೆ. ಮೃತರ ಕುಟುಂಬಸ್ಥರಿಗೆ ಆದಷ್ಟು ಬೇಗ 30 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.
ಚುನವಣಾ ಕರ್ತವ್ಯದ ಕಾರಣದಿಂದಾಗಿ ಮರಣವನ್ನಪ್ಪಿದ ಸಿಬ್ಬಂದಿಯ ಕುಟುಂಬಸ್ಥರಿಗೆ ಪರಿಹಾರವನ್ನು ತಕ್ಷಣವೇ ಜಾರಿ ಬರುವಂತೆ ಮಾಡಬೇಕು ಎಂದು ನಿಮಗೆ ತಿಳಿಸಲು ನನಗೆ ನಿರ್ದೇಶಿಸಲಾಗಿದೆ ಎಂದು ಸಿಂಗ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ವಾರ ಕಳುಹಿಸಲಾದ ಈ ಪತ್ರದಲ್ಲಿ 2128 ಸರ್ಕಾರಿ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ಹಾಜರಾದ ಬಳಿಕ ಸಾವನ್ನಪ್ಪಿದ್ದಾರೆ. ಇದರಲ್ಲಿ 2097 ಮಂದಿ ಕೋವಿಡ್ನಿಂದ ಸಾವಿಗೀಡಾದರೆ 31 ಮಂದಿ ಬೇರೆ ಸಮಸ್ಯೆಯಿಂದ ಮೃತಪಟ್ಟಿದ್ದಾರೆ.
ಸಂತ್ರಸ್ತರ ಕುಟುಂಬಸ್ಥರಿಗೆ ಒಟ್ಟು 633.25 ಕೋಟಿ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. ಈ ಮೊತ್ತದಲ್ಲಿ 606 ಕೋಟಿ ರೂಪಾಯಿಯನ್ನು ರಾಜ್ಯ ಚುನಾವಣಾ ಆಯೋಗಕ್ಕೆ ನೀಡಲಾಗಿದೆ. ಉಳಿದ 27.75 ಕೋಟಿ ರೂಪಾಯಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಸಿಂಗ್ ಹೇಳಿದ್ದಾರೆ.