ನವದೆಹಲಿ: 2024ರ ಜನವರಿ 26ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಂಭ್ರಮದಲ್ಲಿ ನಾರಿ ಶಕ್ತಿ ಅನಾವರಣಗೊಳ್ಳಲಿದೆ.
ಗಣರಾಜ್ಯೋತ್ಸವ ಸಂಭ್ರಮ ಮಹಿಳಾ ವಿಶೇಷತೆಯಿಂದ ಕೂಡಿರಲಿದ್ದು, ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಥಸಂಚಲನ, ಬ್ಯಾಂಡ್, ಸ್ತಬ್ಧ ಚಿತ್ರಗಳು ಮೊದಲಾದ ಕಾರ್ಯಕ್ರಮಗಳನ್ನು ಮಹಿಳೆಯರು ಮುನ್ನಡೆಸಲಿದ್ದಾರೆ.
ಸೇನೆ ಸೇರಿದಂತೆ ಎಲ್ಲಾ ವಲಯಗಳಲ್ಲಿಯೂ ಮಹಿಳೆಯರ ಸಕ್ರಿಯೆತೆಯನ್ನು ಹೆಚ್ಚಿಸುವ ಪ್ರಯತ್ನದ ಭಾಗವಾಗಿ ಗಣರಾಜ್ಯೋತ್ಸವವನ್ನು ಸಂಪೂರ್ಣವಾಗಿ ಮಹಿಳಾಮಯವಾಗಿಸಲು ಕೇಂದ್ರ ರಕ್ಷಣಾ ಸಚಿವಾಲಯದಿಂದ ತೀರ್ಮಾನ ಕೈಗೊಳ್ಳಲಾಗಿದೆ.
ಪಥ ಸಂಚಲನ, ಬ್ಯಾಂಡ್ ಗಳ ಮೆರವಣಿಗೆ, ಸಾಹಸ ಪ್ರದರ್ಶನ, ಸ್ಥಬ್ಧ ಚಿತ್ರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲವನ್ನು ಮಹಿಳೆಯರು ನಡೆಸಿಕೊಡಲಿದ್ದಾರೆ. ಈಗಾಗಲೇ ರಕ್ಷಣಾ ಪಡೆಗಳಿಗೆ ಮತ್ತು ಇತರೆ ಪ್ರಮುಖರಿಗೆ ರಕ್ಷಣಾ ಇಲಾಖೆ ವತಿಯಿಂದ ಈಗಾಗಲೇ ಸುತ್ತೋಲೆ ಹೊರಡಿಸಲಾಗಿದೆ. ಕಳೆದ ಫೆಬ್ರವರಿಯಲ್ಲಿ ಈ ಬಗ್ಗೆ ಚಿಂತನೆ ನಡೆದಿದ್ದು, ವಿಸ್ತೃತ ಸಮಾಲೋಚನೆಯ ನಂತರ ನಾರಿ ಶಕ್ತಿ ಥೀಮ್ ಅಡಿಯಲ್ಲಿ ಗಣರಾಜ್ಯೋತ್ಸವ ಆಯೋಜಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಭದ್ರತಾ ಸಚಿವಾಲಯ, ಕೇಂದ್ರ ಗೃಹ ಸಚಿವಾಲಯ, ಸಂಸ್ಕೃತಿ ಸಚಿವಾಲಯದೊಂದಿಗೆ ಮಾತುಕತೆ ನಡೆಸಿ ಮಹಿಳೆಯರ ವಿಶೇಷತೆಯಿಂದ ಕೂಡಿದ ಕಾರ್ಯಕ್ರಮ ರೂಪಿಸಲಾಗುವುದು.