ಕಳೆದ 25 ವರ್ಷಗಳಿಂದಲೂ ಜನಪ್ರಿಯವಾಗಿರುವ ಹೋಂಡಾ ಸಿಟಿ ಕಾರಿನ 2023ರ ಅವತರಣಿಕೆಯಲ್ಲಿ ಹೊಸ ಲುಕ್ನಲ್ಲಿ ಮಾರುಕಟ್ಟೆಗೆ ಬಂದಿದೆ. ಎಸ್ಯುವಿಗಳು ಭಾರತದ ಕಾರು ಮಾರುಕಟ್ಟೆ ಆಳುತ್ತಿರುವ ಸಂದರ್ಭದಲ್ಲಿಯೇ ಮಧ್ಯಮ ಗಾತ್ರದ ಸೆಡಾನ್ ಆಗಿರುವ ಹೋಂಡಾ ಸಿಟಿ ಮರು ಅವತಾರದಲ್ಲಿ ಮಾರುಕಟ್ಟೆಗೆ ಬಂದಿದೆ.
ಪೆಟ್ರೋಲ್ ಹಾಗೂ ಇ: ಎಚ್ಇವಿ ಎಂಬ ಎರಡು ಇಂಜಿನ್ ಅವತಾರಗಳಲ್ಲಿ ಬರುವ ಹೋಂಡಾ ಸಿಟಿ 2023ಗೆ ಕೆಲವೇ ಕೆಲವು ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಲಾಗಿದೆ. ಇನ್ನಷ್ಟು ಆಕರ್ಷಕವಾದ ಸ್ಪೋರ್ಟಿ ವಿನ್ಯಾಸದೊಂದಿಗೆ ವಜ್ರಾಕೃತಿಯ ಚೆಕರ್ಡ್ ಮುಂಬದಿ ಗ್ರಿಲ್, ಕಾರ್ಬನ್ ಲೇಪಿತ ಬಂಪರ್ಗಳೊಂದಿಗೆ ನೋಡಲು ಇನ್ನಷ್ಟು ಅಂದವಾಗಿ ಕಾಣುತ್ತದೆ ಹೋಂಡಾ ಸಿಟಿ 2023.
ಮುಂಬದಿಯಲ್ಲಿ ಎಲ್ಇಡಿ ಹೆಡ್ಲ್ಯಾಂಪ್ಗಳು, ಎಲ್ಇಡಿ ಟೇಲ್ ಲ್ಯಾಂಪ್ಗಳ ಸುತ್ತ ಜ಼ಡ್ ಆಕಾರದ ರಾಪಿಂಗ್ ಕಾರಿನ ಹೊರಾಂಗಣ ನೋಟದೊಂದಿಗೆ ಚೆನ್ನಾಗಿ ಹೊಂದುತ್ತಿದೆ. ಹೊಸ ಡ್ಯುಯಲ್ ಟೋನ್ 16 ಇಂಚಿನ ಅಲಾಯ್ ಚಕ್ರಗಳನ್ನು ಹೋಂಡಾ ಸಿಟಿ 2023ಕ್ಕೆ ಅಳವಡಿಸಲಾಗಿದೆ.
ಇನ್ನು ಒಳಾಂಗಣಕ್ಕೆ ಬಂದರೆ: ಪ್ರೀಮಿಯಮ್ ಲೆದರ್ ಸೀಟುಗಳು ಹಾಗೂ ಬೀಜ್ ನಿಮ್ಮನ್ನು ಕಾರಿನೊಳಗೆ ಸ್ವಾಗತಿಸುತ್ತವೆ. ಮುಂಬದಿಯ ಬಾಗಿಲಿನ ಹ್ಯಾಂಡಲ್ಗಳು ಹಾಗೂ ನೆಲದಲ್ಲಿ ಲೈಟಿಂಗ್ ಇದ್ದು, ಡ್ಯಾಶ್ಬೋರ್ಡ್ಗೆ ಕಾರ್ಬನ್ ಫಿನಿಶಿಂಗ್ ಕೊಟ್ಟಿದೆ ಹೋಂಡಾ. ಮುಂಬದಿಯಲ್ಲಿ ತೆರೆಯಬಲ್ಲ ವೈರ್ಲೆಸ್ ಚಾರ್ಜರ್ ಇದ್ದು, ನಿಮಗೆ ಹೆಚ್ಚುವರಿ ಕಪ್ ಹೋಲ್ಡರ್ ಬೇಕಿದ್ದಲ್ಲಿ ಈ ಚಾರ್ಜರ್ಅನ್ನು ತೆಗೆದು ಹಾಕಬಹುದಾಗಿದೆ. 506 ಲೀಟರ್ಗಳ ಬೃಹತ್ ಬೂಟ್ ಸಾಮರ್ಥ್ಯ ಇದ್ದು, ರಾತ್ರಿ ವೇಳೆ ನಿಮಗೆ ನೆರವಾಗಲು ಬೆಳಕಿನ ವ್ಯವಸ್ಥೆಯನ್ನೂ ಮಾಡಲಾಗಿದೆ.
ಹಿಂಬದಿಯ ಸೀಟುಗಳಿಗೆ ಸಾಕಷ್ಟು ವಿಶಾಲವಾದ ಲೆಗ್ರೂಂ ಹಾಗೂ ಹೆಡ್ರೂಂ ನೀಡಲಾಗಿದೆ. ಆರಾಮವಾಗಿ ಮೂರು ಪ್ರಯಾಣಿಕರು ಕಾರಿನ ಹಿಂಬದಿಯಲ್ಲಿ ಕೂರಬಹುದಾಗಿದೆ. ಸ್ಮಾರ್ಟ್ಫೋನ್ ಪಾಕೆಟ್ಗಳು, ಹಿಂಬದಿ ಎಸಿ ವೆಂಟ್ಗಳು ಹಾಗೂ ಎರಡು ಚಾರ್ಜಿಂಗ್ ಪೋರ್ಟ್ಗಳನ್ನು ಹಿಂಬದಿ ಪ್ರಯಾಣಿಕರಿಗೆ ನೀಡಲಾಗಿದೆ.
ಒಳಾಂಗಣದ ಮುಂಬದಿಯಲ್ಲಿ 17.7 ಇಂಚಿನ ಎಚ್ಡಿ ಟಿಎಫ್ಟಿ ಮೀಟರ್ ಹಾಗೂ ಚಾಲಕನ ಮಾಹಿತಿ ಇಂಟರ್ಫೇಸ್ ಜೊತೆಗೆ 20.3 ಸೆಂಮೀ ಟಚ್ಸ್ಕ್ರೀನ್ ಇನ್ಫೋಟೇನ್ಮೆಂಟ್ ವ್ಯವಸ್ಥೆ ನೀಡಲಾಗಿದೆ. ಎಲ್ಲಾ ಹೊಸ ಕಾರುಗಳ ಹಾಗೆ ವೈರ್ಲೆಸ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸೌಲಭ್ಯಗಳನ್ನು ಹೋಂಡಾ ಸಿಟಿ 2023 ಕೊಡಮಾಡುತ್ತಿದೆ. ತನ್ನ ಹೋಂಡಾ ಕನೆಕ್ಟ್ನೊಂದಿಗೆ ಐದು ವರ್ಷಗಳ ಚಂದಾದಾರಿಕೆಯನ್ನು ಹೋಂಡಾ ಉಚಿತವಾಗಿ ನೀಡುತ್ತಿದೆ.
ಸ್ವಯಂ ಚಾಲಿತ ವಾತಾವರಣ ನಿಯಂತ್ರಣ ವ್ಯವಸ್ಥೆಯಿಂದಾಗಿ ಕಾರಿನ ಒಳಾಂಗಣ ತ್ವರಿತವಾಗಿ ತಣ್ಣಗಾಗುತ್ತದೆ. ಒಳಾಂಗಣದ ಗಾಳಿಯನ್ನು ಶುದ್ಧವಾಗಿಡಲು 2.5 ಪಿಎಂ ಕ್ಯಾಬಿನ್ ಏರ್ ಫಿಲ್ಟರ್ ಅನ್ನು ಕೊಡಮಾಡಲಾಗಿದೆ. 8 ಸ್ಪೀಕರ್ ಮ್ಯೂಸಿಕ್ ಸಿಸ್ಟಂನೊಂದಿಗೆ ಅತ್ಯುತ್ತಮ ಗುಣಮಟ್ಟದ ದನಿಯಲ್ಲಿ ಸಂಗೀತ ಆಲಿಸಬಹುದಾಗಿದೆ. ಒನ್ ಟಚ್ ಎಲೆಕ್ಟ್ರಿಕ್ ಸನ್ರೂಫ್ ಕಾರಿನ ಪ್ರೀಮಿಯಂ ಅನುಭವವನ್ನು ಇನ್ನಷ್ಟು ಹೆಚ್ಚಿಸಿದೆ.
ಇಂಜಿನ್ ವಿಚಾರಕ್ಕೆ ಬರುವುದಾದರೆ: ಮತ್ತಷ್ಟು ಸುಧಾರಿತ ದಹನ ಸಾಮರ್ಥ್ಯದೊಂದಿಗೆ 1.5L i-VTEC DOHC + VTC ಪೆಟ್ರೋಲ್ ಇಂಜಿನ್ನ ಮಾಲಿನ್ಯದ ಮಟ್ಟಗಳು ಬಹಳ ಕಡಿಮೆ ಆಗಿವೆ. 119 ಬಿಎಚ್ಪಿ ಟಾಪ್ ಪವರ್ ಹಾಗೂ 145 ಎನ್ಎಂ ನಷ್ಟು ಟಾರ್ಕ್ ಸಾಮರ್ಥ್ಯವನ್ನು ಇಂಜಿನ್ ಕೊಡಮಾಡುತ್ತದೆ. 6-ಸ್ಪೀಡ್ ಮ್ಯಾನುವಲ್ ಹಾಗೂ 7-ಸ್ಪೀಡ್ ಸಿವಿಟಿ ಟ್ರಾನ್ಸ್ಮಿಶನ್ ಘಟಕಗಳನ್ನು ಹೋಂಡಾ ಸಿಟಿ 2023 ಹೊಂದಿದೆ.
ಹೋಂಡಾ ಸಿಟಿ 2023ನ ಆರಂಭಿಕ ಬೆಲೆ 11.49 ಲಕ್ಷ ರೂ.ಗಳಿದ್ದು (ಎಕ್ಸ್-ಶೋರೂಂ) 18.4 ಕಿಮೀ ಮೈಲೇಜ್ ಕೊಡುವುದಾಗಿ ಕಂಪನಿ ಹೇಳಿಕೊಂಡಿದೆ. ತನ್ನ ಹೊಸ ಸೆಡಾನ್ ಮೇಲೆ 10 ವರ್ಷಗಳ ವಾರಂಟಿ ಕೊಡುತ್ತಿದೆ ಹೋಂಡಾ. ಹೋಂಡಾ 2023 SV, V, VX, ಮತ್ತು ZX ಎಂಬ ನಾಲ್ಕು ಅವತಾರಗಳಲ್ಲಿ ಬರಲಿದೆ.
ಇನ್ನು ಸುರಕ್ಷತೆ ವಿಚಾರಕ್ಕೆ ಬರುವುದಾದರೆ; ಗ್ಲೋಬಲ್ ಎನ್ಸಿಎಪಿಯಿಂದ ಫೈವ್ ಸ್ಟಾರ್ ರೇಟಿಂಗ್ ಪಡೆದಿರುವ ಸುರಕ್ಷತವಾ ವ್ಯವಸ್ಥೆಯನ್ನು ಹೋಂಡಾ ಸಿಟಿ 2023ನಲ್ಲಿ ಕೊಡಮಾಡಲಾಗಿದೆ. ಆರು ಏರ್ಬ್ಯಾಗ್ಗಳು ಹಾಗೂ ಲೇನ್ ವಾಚ್ ಕ್ಯಾಮೆರಾದೊಂದಿಗೆ ಬರುವ ಈ ಸೆಡಾನ್ನಲ್ಲಿ ಅಡಾಸ್ ಲೆವೆಲ್ 2ರ ಮಟ್ಟದ ಸುರಕ್ಷತಾ ವ್ಯವಸ್ಥೆ ಇದೆ. ಅಡಾಸ್ 2 ಸುರಕ್ಷತಾ ವ್ಯವಸ್ಥೆ ಕೊಡಮಾಡುತ್ತಿರುವ ಅತ್ಯಂತ ಕಡಿಮೆ ಬೆಲೆಯ ಕಾರು ಹೋಂಡಾ ಸಿಟಿ 2023 ಆಗಿದೆ.