ಬೆಂಗಳೂರು: 2023ರ ಚುನಾವಣೆಗೆ ನಾನು ಆಕ್ಟೀವ್ ಆಗಿದ್ದು, ಚುನಾವಣೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ, ತಿಪ್ಪೇಸ್ವಾಮಿ ಸೇರಿದಂತೆ ಜೆಡಿಎಸ್ ನಾಯಕರು ಸಭೆ ನಡೆಸಿದ್ದೇವೆ. ಅನೇಕ ಯೋಜನೆಗಳನ್ನು ಆಯೋಜಿಸಲಾಗಿದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 8ರಿಂದ ಜೆಡಿಎಸ್ ಎರಡನೇ ಹಂತದ ಕಾರ್ಯಾಗಾರ ನಡೆಯಲಿದೆ. ಅಲ್ಲಿಂದ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದರು.
ಉಪಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡುವುದಿಲ್ಲ. ಜನರು ನೀಡಿದ ತೀರ್ಮಾನದಂತೆ ಫಲಿತಾಂಶವನ್ನು ಸ್ವೀಕಾರ ಮಾಡುತ್ತೇವೆ ಅಷ್ಟೇ. ಯಾವುದೇ ಪಕ್ಷ ಕಟ್ಟಲು ಆರ್ಥಿಕ ಶಕ್ತಿ ಅಗತ್ಯ. ಕಾಂಗ್ರೆಸ್ ಹಾಗೂ ಬಿಜೆಪಿ ಬಳಿ ಹಣ ಎಷ್ಟಿದೆ ಎಂದು ಪುನರುಚ್ಛಾರ ಮಾಡಲ್ಲ. ಇಂದು ಪ್ರಾದೇಶಿಕ ಪಕ್ಷ ಉಳಿಸಬೇಕಿದೆ, ಆರ್ಥಿಕತೆಯೂ ಮುಖ್ಯವಾಗಿದೆ ಈ ಜವಾಬ್ದಾರಿಯನ್ನು ಎಲ್ಲರೂ ಹೊರಬೇಕು ಎಂದು ಹೇಳಿದರು.