ವರ್ಷದ ಎರಡನೇ ಸೂರ್ಯಗ್ರಹಣ ಅಕ್ಟೋಬರ್ 25 ರಂದು ಸಂಭವಿಸಲಿದೆ. ದೀಪಾವಳಿ ಅಮವಾಸ್ಯೆದಿನ ಸೂರ್ಯಗ್ರಹಣವಾಗಲಿದ್ದು, ಭಾಗಶಃ ಸೂರ್ಯ ಗ್ರಹಣವಾಗಿರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಮಂಗಳವಾರ ತುಲಾ ರಾಶಿಯಲ್ಲಿ ಈ ಗ್ರಹಣ ಸಂಭವಿಸಲಿದೆ. ಈ ಸೂರ್ಯ ಗ್ರಹಣದ ಅವಧಿಯು ಸುಮಾರು 4 ಗಂಟೆ 3 ನಿಮಿಷಗಳವರೆಗೆ ಇರಲಿದೆ. ಈ ವರ್ಷದ ಸೂರ್ಯಗ್ರಹಣವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಯಾಕೆಂದ್ರೆ ಗ್ರಹಣದ ಸೂತಕ ದೀಪಾವಳಿಯ ರಾತ್ರಿಯಿಂದಲೇ ಪ್ರಾರಂಭವಾಗುತ್ತದೆ.
ಸೂರ್ಯಗ್ರಹಣ ಅಕ್ಟೋಬರ್ 25 ರಂದು ಮಧ್ಯಾಹ್ನ 2 ಗಂಟೆ 29 ನಿಮಿಷಕ್ಕೆ ಪ್ರಾರಂಭವಾಗುತ್ತದೆ. ಸೂರ್ಯಗ್ರಹಣದ ಮಧ್ಯಾವಧಿ ಸಂಜೆ 4 ಗಂಟೆ 30 ನಿಮಿಷ. ಸಂಜೆ 6 ಗಂಟೆ 32ಕ್ಕೆ ಗ್ರಹಣ ಮುಗಿಯಲಿದೆ. ಸೂರ್ಯಗ್ರಹಣ ಮುಗಿಯುವ ಮೊದಲೇ ಭಾರತದಲ್ಲಿ ಸೂರ್ಯಾಸ್ತ ಸಂಭವಿಸುತ್ತದೆ. ಹಾಗಾಗಿ ಭಾರತದಲ್ಲಿ ಸೂರ್ಯಾಸ್ತವನ್ನು ಸೂರ್ಯಗ್ರಹಣದ ಮೋಕ್ಷ ಎಂದು ಪರಿಗಣಿಸಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂತಕ ಅವಧಿಯು ಗ್ರಹಣ ಪ್ರಾರಂಭವಾಗುವ 12 ಗಂಟೆಗಳ ಮೊದಲು ಪ್ರಾರಂಭವಾಗುತ್ತದೆ. ಹಾಗಾಗಿ ಆ ಸಮಯದಲ್ಲಿ ಯಾವುದೇ ಪೂಜೆಯನ್ನು ಮಾಡುವುದು ಮಂಗಳಕರವಲ್ಲ.
ಸೂರ್ಯ ಗ್ರಹಣ ಇಡೀ ಭಾರತದಲ್ಲಿ ಗೋಚರವಾಗಲಿದೆ. ಸೂರ್ಯಗ್ರಹಣದ ಸಮಯದಲ್ಲಿ ಎಲ್ಲ ದೇವಸ್ಥಾನದ ಬಾಗಿಲು ಮುಚ್ಚಿರಲಿದೆ. ಸೂರ್ಯಗ್ರಹಣ ಮುಗಿಯುತ್ತಿದ್ದಂತೆ ಎಲ್ಲರೂ ಸ್ನಾನ ಮಾಡಿ ನಂತ್ರ ದೇವರ ಪೂಜೆ ಮಾಡಬೇಕು. ಕಾರ್ತಿಕ ಮಾಸದ ಅಮಾವಾಸ್ಯೆಯಂದು ಸೂರ್ಯಗ್ರಹಣ ಸಂಭವಿಸುವುದರಿಂದ ಈ ದಿನ ತೀರ್ಥಯಾತ್ರೆ, ಸ್ನಾನ ಮತ್ತು ದಾನಕ್ಕೆ ವಿಶೇಷ ಮಹತ್ವವಿದೆ.