ಬಲ್ಗೇರಿಯಾದ ಮಹಿಳೆ ಬಾಬಾ ವಂಗಾ ಬಗ್ಗೆ ನೀವೂ ಕೇಳಿರಬಹುದು. ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಅನ್ನೋದು ಈಕೆಯ ಮೂಲ ಹೆಸರು. ಆಕೆಗೆ ಅತೀಂದ್ರಿಯ ಶಕ್ತಿ ಇದೆ ಎಂದೇ ಜನರು ನಂಬಿದ್ದರು. ಹಾಗಾಗಿ ಬಾಬಾ ವಂಗಾ ಎಂದೇ ಆಕೆ ಪ್ರಸಿದ್ಧಿ ಪಡೆದಿದ್ದರು.
ತಮ್ಮ ಜೀವಿತಾವಧಿಯಲ್ಲಿ ಬಾಬಾ ವಂಗಾ ನುಡಿದಿರುವ ಹಲವು ಭವಿಷ್ಯವಾಣಿಗಳು ನಿಜವಾಗಿವೆ. 9/11 ದಾಳಿ ಸೇರಿದಂತೆ ಅನೇಕ ಘಟನೆಗಳನ್ನು ಬಾಬಾ ವಂಗಾ ಮೊದಲೇ ಊಹಿಸಿದ್ದು ವಿಶೇಷ. ಆಕೆಯನ್ನು ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೂ ಕರೆಯಲಾಗುತ್ತದೆ.
ಆಕೆ ನುಡಿದಿರುವ ಭವಿಷ್ಯವಾಣಿಗಳಲ್ಲಿ ಶೇ.85ರಷ್ಟು ನಿಜವಾಗಿರುವುದು ವಿಶೇಷ. ಅವುಗಳಲ್ಲಿ ಪ್ರಮುಖ ಘಟನೆಗಳೆಂದರೆ ಚರ್ನೋಬಿಲ್ ದುರಂತ, ರಾಜಕುಮಾರಿ ಡಯಾನಾ ಸಾವು, ಸೋವಿಯತ್ ಒಕ್ಕೂಟದ ವಿಸರ್ಜನೆ, 2004ರ ಥೈಲ್ಯಾಂಡ್ ಸುನಾಮಿ ಮತ್ತು ಬರಾಕ್ ಒಬಾಮಾ ಅವರ ಅಧ್ಯಕ್ಷತೆ.
12ನೇ ವಯಸ್ಸಿನಲ್ಲಿ ಭಾರಿ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ತನ್ನ ದೃಷ್ಟಿ ಕಳೆದುಕೊಂಡ ನಂತರ ಭವಿಷ್ಯವನ್ನು ನೋಡಲು ದೇವರೇ ತನಗೆ ಅಪರೂಪದ ಉಡುಗೊರೆಯನ್ನು ನೀಡಿದ್ದಾನೆಂದು ಬಾಬಾ ವಂಗಾ ಹೇಳಿಕೊಂಡಿದ್ದಳು. ಆಕೆಯ ಮಾತಿನ ಪ್ರಕಾರ 5079ಕ್ಕೆ ಜಗತ್ತು ಅಂತ್ಯವಾಗಲಿದೆ. ಅಲ್ಲಿಯವರೆಗೆ ಏನೇನು ನಡೆಯಲಿದೆ ಎಂಬುದರ ಮುನ್ನೋಟವನ್ನು ಆಕೆ ನುಡಿದಿದ್ದಾಳೆ.
ಇದೀಗ ಭಾರತದ ಬಗ್ಗೆ ಬಾಬಾ ವಂಗಾ ನುಡಿದಿರುವ ಭವಿಷ್ಯವಾಣಿ ವೈರಲ್ ಆಗಿದೆ. ನೆಟ್ಟಿಗರನ್ನು ಚಿಂತೆಗೀಡು ಮಾಡಿದೆ. 2022ರಲ್ಲಿ ದೇಶಾದ್ಯಂತ ಕ್ಷಾಮಕ್ಕೆ ಕಾರಣವಾಗುವ ಮಾರಣಾಂತಿಕ ಮಿಡತೆ ದಾಳಿಯನ್ನು ಭಾರತ ಎದುರಿಸಲಿದೆ ಎಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಪ್ರಪಂಚದ ತಾಪಮಾನದ ಕುಸಿತದಿಂದಾಗಿ ಮಿಡತೆಗಳ ಸಂಖ್ಯೆ ಏಕಾಏಕಿ ಹೆಚ್ಚಾಗುತ್ತದೆ ಮತ್ತು ಭಾರತದಲ್ಲಿ ಬೆಳೆಗಳ ಮೇಲೆ ದಾಳಿ ಅವು ಮಾಡುತ್ತವೆ. ಇದರ ಪರಿಣಾಮವಾಗಿ ಕ್ಷಾಮ ಮತ್ತು ಆಹಾರದ ಕೊರತೆ ಉಂಟಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದರು.
2022ರ ಬಗ್ಗೆ ಬಾಬಾ ವಂಗಾ ನುಡಿದಿದ್ದ 6 ಭವಿಷ್ಯವಾಣಿಗಳಲ್ಲಿ ಈಗಾಗ್ಲೇ 2 ನಿಜವಾಗಿದೆ. ಹಾಗಾಗಿ ಭಾರತದ ಬಗ್ಗೆ ವಂಗಾ ಕೊಟ್ಟಿರೋ ಎಚ್ಚರಿಕೆ ಆತಂಕ ಮೂಡಿಸಿದೆ. ಈ ವರ್ಷ ಏಷ್ಯಾದ ಹಲವು ದೇಶಗಳು ಮತ್ತು ಆಸ್ಟ್ರೇಲಿಯಾ ತೀವ್ರವಾದ ಪ್ರವಾಹದ ಹೊಡೆತಕ್ಕೆ ಒಳಗಾಗುತ್ತದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಅದು ನಿಜವಾಗಿದೆ. ಭಾರೀ ಮಳೆ ಮತ್ತು ಪ್ರವಾಹದಿಂದ ಆಸ್ಟ್ರೇಲಿಯಾ ತತ್ತರಿಸಿದೆ. ಬರಗಾಲದಿಂದ ದೊಡ್ಡ ನಗರಗಳು ನೀರಿನ ಕೊರತೆ ಎದುರಿಸುತ್ತವೆ ಎಂದು ಬಾಬಾ ವಂಗಾ ಹೇಳಿದ್ದರು. ಪೋರ್ಚುಗಲ್ ಮತ್ತು ಇಟಲಿಯಲ್ಲಿ ಅಂಥದ್ದೇ ಸ್ಥಿತಿ ನಿರ್ಮಾಣವಾಗಿದೆ.
2023ರಲ್ಲಿ ಭೂಮಿಯ ಕಕ್ಷೆ ಬದಲಾಗುತ್ತೆ ಮತ್ತು 2028ರಲ್ಲಿ ಗಗನಯಾತ್ರಿಗಳು ಶುಕ್ರಕ್ಕೆ ಪ್ರಯಾಣಿಸುತ್ತಾರೆಂದು ಬಾಬಾ ವಂಗಾ ಭವಿಷ್ಯ ನುಡಿದಿದ್ದಾರೆ. ಅವರ ಭವಿಷ್ಯವಾಣಿಯ ಪ್ರಕಾರ 2046ರಲ್ಲಿ ಅಂಗಾಂಗ ಕಸಿ ತಂತ್ರಜ್ಞಾನದಿಂದಾಗಿ ಜನರು 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತಾರಂತೆ. 2100 ರಿಂದ ರಾತ್ರಿಯು ಕಣ್ಮರೆಯಾಗುತ್ತದೆ ಮತ್ತು ಕೃತಕ ಸೂರ್ಯನ ಬೆಳಕು ಭೂಮಿಯ ಇನ್ನೊಂದು ಭಾಗವನ್ನು ಬೆಳಗಿಸುತ್ತದೆ ಎಂದವರು ಹೇಳಿದ್ದಾರೆ. 5079 ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಕೂಡ ಬಾಬಾ ವಂಗಾ ನುಡಿದಿದ್ದು, ಈ ಭವಿಷ್ಯ ನಿಜವಾಗುತ್ತದೆಯೇ ಎಂಬ ಕುತೂಹಲ ಎಲ್ಲರಲ್ಲೂ ಇದೆ.