ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ಕಾಲಿಟ್ಟ ನಂತರ ಮನೆಯಿಂದ ಆಚೆ ಹೋಗಲು ಬಹುತೇಕರು ಭಯಪಡುತ್ತಾರೆ.
ಆದರೆ, ಏನಾದ್ರೂ ಸ್ಪೆಷಲ್ ಖಾದ್ಯ ಸವಿಯೋಣ ಅಂದ್ರೆ ಹೋಟೆಲ್ ಗಳಿಗೆ ಹೋಗಲು ಭಯ. ಆದರೆ, ಇದಕ್ಕೆಂದೇ, ಆನ್ಲೈನ್ ಆಹಾರ ವಿತರಣಾ ಸಂಸ್ಥೆಗಳು ನಗರಗಳಲ್ಲಿ ಲಗ್ಗೆಯಿಟ್ಟಿವೆ. ಹೀಗಾಗಿ ಮನೆಯಲ್ಲೇ ಕುಳಿತು ಆಹಾರ ಆರ್ಡರ್ ಮಾಡಿರುವವರ ಸಂಖ್ಯೆ 2021ರಲ್ಲಿ ತುಸು ಹೆಚ್ಚೇ ಇದೆ. ಇನ್ನೇನು 2021ಕ್ಕೆ ಗುಡ್ ಬೈ ಹೇಳುವ ಸಮಯ ಬಂದೇ ಬಿಟ್ಟಿದೆ. ಇದು ಕಳೆದು ಹೋದ ಕ್ಷಣಗಳನ್ನು ಹಿಂತಿರುಗಿ ನೋಡುವ ಸಮಯ. ಆಹಾರ ವಿತರಣಾ ಸಂಸ್ಥೆ ಸ್ವಿಗ್ಗಿ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ.
ಹೌದು, 2021ರಲ್ಲಿ ಭಾರತದಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಖಾದ್ಯ ಯಾವುದು ಅನ್ನೋದನ್ನು ಸ್ವಿಗ್ವಿ ಬಹಿರಂಗಪಡಿಸಿದೆ. ಈ ವರ್ಷ ಭಾರತೀಯರು, ಕನಿಷ್ಠ ಅಂದ್ರೂ ಪ್ರತಿ ನಿಮಿಷಕ್ಕೆ 115 ಪ್ಲೇಟ್ ಬಿರಿಯಾನಿ ಆರ್ಡರ್ ಮಾಡಿದ್ದಾರಂತೆ. 4.25 ಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರು ಚಿಕನ್ ಬಿರಿಯಾನಿ ಆರ್ಡರ್ ಮಾಡುವ ಮೂಲಕ ಸ್ವಿಗ್ಗಿಗೆ ಪಾದಾರ್ಪಣೆ ಮಾಡಿದ್ದಾರೆ ಎಂದು ವರದಿ ತಿಳಿಸಿದೆ. ವರ್ಷದಲ್ಲಿ ಅತ್ಯಂತ ಹೆಚ್ಚು ಸೇವಿಸಿದ ತಿಂಡಿ ಅಂದ್ರೆ ಅದು ಸಮೋಸಾ. ಸ್ವಿಗ್ಗಿಯಲ್ಲಿ ಸುಮಾರು 5 ಮಿಲಿಯನ್ ಆರ್ಡರ್ಗಳು ಬಂದಿದ್ದು, ಅದು ನ್ಯೂಜಿಲೆಂಡ್ನ ಜನಸಂಖ್ಯೆಗೆ ಸಮವಾಗಿವೆ.
2020ರಲ್ಲಿ, ಭಾರತದಲ್ಲಿ ಪ್ರತಿ ನಿಮಿಷಕ್ಕೆ 90 ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿತ್ತು. ಇದು 2021 ರಲ್ಲಿ 115ಕ್ಕೆ ಏರಿದೆ. ಸಮೋಸಾವನ್ನು ಚಿಕನ್ ವಿಂಗ್ಗಳಿಗಿಂತ ಆರು ಪಟ್ಟು ಹೆಚ್ಚು ಆರ್ಡರ್ ಮಾಡಲಾಗಿದ್ದರೆ, ಪಾವ್ ಭಾಜಿ 2.1 ಮಿಲಿಯನ್ ಆರ್ಡರ್ಗಳೊಂದಿಗೆ ಭಾರತದ ಎರಡನೇ ನೆಚ್ಚಿನ ತಿಂಡಿಯಾಗಿದೆ. ಒಟ್ಟು 2.1 ಮಿಲಿಯನ್ ಆರ್ಡರ್ಗಳೊಂದಿಗೆ, ಗುಲಾಬ್ ಜಾಮೂನ್ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಿದ ಸಿಹಿ ತಿಂಡಿಯಾಗಿದ್ದು, ನಂತರ 1.27 ಮಿಲಿಯನ್ ಆರ್ಡರ್ಗಳೊಂದಿಗೆ ರಾಸ್ಮಲೈ ಪಟ್ಟಿಯಲ್ಲಿ ನಂತರದ ಸ್ಥಾನ ಪಡೆದಿದೆ.
ಸ್ವಿಗ್ಗಿಯಲ್ಲಿ ಆರೋಗ್ಯಕರ ಆಹಾರಕ್ಕಾಗಿ ಹುಡುಕಾಟವು 2021 ರಲ್ಲಿ ದ್ವಿಗುಣಗೊಂಡಿದೆ. ಬೆಂಗಳೂರು ಅತ್ಯಂತ ಆರೋಗ್ಯ ಪ್ರಜ್ಞೆಯ ನಗರವಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ಹೈದರಾಬಾದ್ ಮತ್ತು ಮುಂಬೈ ಇವೆ.