ಪಂಬಾಜ್‌ನ ಜನಪ್ರಿಯ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿರೋ ಲಾರೆನ್ಸ್ ಬಿಷ್ಣೋಯ್, 2018ರಲ್ಲೇ ನಟ ಸಲ್ಮಾನ್ ಖಾನ್ ಹತ್ಯೆಗೆ ಸಂಚು ರೂಪಿಸಿದ್ದ ಅನ್ನೋ ಆಘಾತಕಾರಿ ಸಂಗತಿ ಈಗ ಬಯಲಾಗಿದೆ. ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಬಿಷ್ಣೋಯ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾನೆ.
1998ರಲ್ಲಿ ರಾಜಸ್ತಾನದ ಜೋಧ್ಪುರದಲ್ಲಿ ಹಮ್ ಸಾಥ್ ಸಾಥ್ ಹೈ ಚಿತ್ರೀಕರಣದ ಸಂದರ್ಭದಲ್ಲಿ ಕೃಷ್ಣಮೃಗ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾನು ಸಲ್ಮಾನ್ ಖಾನ್‌ರನ್ನು ಹತ್ಯೆ ಮಾಡಬಯಸಿದ್ದೆ ಅಂತಾ ಬಿಷ್ಣೋಯ್ ಪೊಲೀಸರ ಬಳಿ ಹೇಳಿದ್ದಾನೆ. ಕಳೆದ ತಿಂಗಳು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಮೂವರು ಸದಸ್ಯರು ನಟ ಸಲ್ಮಾನ್ ಖಾನ್ ಮತ್ತವರ ತಂದೆ ಸಲೀಂ ಖಾನ್‌ಗೆ ಪತ್ರದ ಮೂಲಕ ಜೀವ ಬೆದರಿಕೆ ಹಾಕಿದ್ದರು.
ಸಿಧು ಮೂಸೆವಾಲಾಗೆ ಆದ ಗತಿಯೇ ನಿಮಗಿಬ್ಬರಿಗೂ ಆಗಲಿದೆ ಅಂತಾ ಎಚ್ಚರಿಕೆ ನೀಡಿದ್ದರು. ಹರಿಯಾಣ, ರಾಜಸ್ತಾನ ಮತ್ತು ಪಂಜಾಬ್‌ನಲ್ಲಿ ಬಿಷ್ಣೋಯ್ ಸಮುದಾಯದವರು ಕೃಷ್ಣಮೃಗವನ್ನು ಆರಾಧಿಸ್ತಾರೆ. ಅದನ್ನೇ ಬೇಟೆಯಾಡಿರೋದ್ರಿಂದ ಸಲ್ಮಾನ್ ಖಾನ್‌ರನ್ನು ಕೊಲ್ಲಲು ಸ್ಕೆಚ್ ಹಾಕಿದ್ದೆ ಅಂತಾ ಬಿಷ್ಣೋಯ್ ಬಾಯ್ಬಿಟ್ಟಿದ್ದಾನೆ.
ತನ್ನ ಸಹಚರ ಸಂಪತ್ ನೆಹ್ರಾ ಎಂಬಾತ ಸಲ್ಮಾನ್ ಖಾನ್ ಕೊಲ್ಲಲು ಸಜ್ಜಾಗಿದ್ದು ನಿಜವೆಂದು ಬಿಷ್ಣೋಯ್ ಒಪ್ಪಿಕೊಂಡಿದ್ದಾನೆ. ಆದ್ರೆ ಸಂಪತ್ ಸದ್ಯ ತಲೆಮರೆಸಿಕೊಂಡಿದ್ದಾನೆ. ಸಲ್ಮಾನ್ ಖಾನ್‌ರನ್ನು ಕೊಲ್ಲಲೆಂದೇ ಸಂಪತ್ ಮುಂಬೈಗೆ ಶಿಫ್ಟ್ ಆಗಿದ್ದ. ಸಲ್ಲು ಮನೆ ಬಳಿ ಅಡ್ಡಾಡುತ್ತಿದ್ದ. ಆದ್ರೆ ದೂರದಿಂದ ಫೈರ್ ಮಾಡುವಂತಹ ಗನ್ ಆತನ ಬಳಿ ಇರಲಿಲ್ಲ.
ನಂತರ ಬಿಷ್ಣೋಯ್ 4 ಲಕ್ಷ ರೂಪಾಯಿ ಕೊಟ್ಟು ದಿನೇಶ್ ದಗರ್ ಎಂಬಾತನ ಬಳಿ ಆರ್‌ಕೆ ಸ್ಪ್ರಿಂಗ್ ರೈಫಲ್ ಖರೀದಿಸಿದ್ದ. 2018ರಲ್ಲೇ ಪೊಲೀಸರು ಈ ರೈಫಲ್ ಅನ್ನು ವಶಪಡಿಸಿಕೊಂಡಿದ್ದರು. ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಸಲ್ಲು ಪರ ವಾದ ಮಂಡಿಸಿದ್ದ ವಕೀಲರಿಗೆ ಕೂಡ ಬಿಷ್ಣೋಯ್ ಗ್ಯಾಂಗ್‌ನಿಂದ ಜೀವ ಬೆದರಿಕೆ ಬಂದಿತ್ತು.