2013ರಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಅಂದಿನ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಹುಂಕಾರ್ ರ್ಯಾಲಿ ನಡೆದ ಸ್ಥಳದಲ್ಲಿ ನಡೆದ ಸರಣಿ ಸ್ಫೋಟದ ಸಂಬಂಧ ಪಾಟ್ನಾದ ರಾಷ್ಟ್ರೀಯ ತನಿಖಾ ಸಂಸ್ಥೆಯ ವಿಶೇಷ ನ್ಯಾಯಾಲಯವು ಇಂದು ತೀರ್ಪನ್ನು ಪ್ರಕಟಿಸಿದೆ. ಪ್ರಕರಣದ 10 ಆರೋಪಿಗಳನ್ನು 9 ಆರೋಪಿಗಳನ್ನು ವಿಶೇಷ ಕೋರ್ಟ್ ದೋಷಿ ಎಂದು ಪರಿಗಣಿಸಿದೆ. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಓರ್ವ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ.
2013ರ ಅಕ್ಟೋಬರ್ 27ರಂದು ಬಿಹಾರದ ರಾಜಧಾನಿಯಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಆರು ಮಂದಿ ಸಾವನ್ನಪ್ಪಿದ್ದರು ಹಾಗೂ 90 ಮಂದಿ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಹಾಗೂ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾದ ಸದಸ್ಯರನ್ನು ಆರೋಪಿಗಳೆಂದು ಬಂಧಿಸಲಾಗಿತ್ತು.
9 ಮಂದಿ ಇಂಡಿಯನ್ ಮುಜಾಹಿದ್ದೀನ್ ಶಂಕಿತರು ಹಾಗೂ ಓರ್ವ ಎಸ್ಐಎಂಐ ಸಂಘಟನೆಯ ಸದಸ್ಯನನ್ನು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ನುಮನ್ ಅನ್ಸಾರಿ, ಹೈದರಿ ಅಲಿ ಅಲಿಯಾಸ್ ಬ್ಲಾಕ್ ಬ್ಯೂಟಿ, ಮೊಹಮ್ಮದ್ ಮುಜಿಬುಲ್ಲಾ ಅನ್ಸಾರಿ, ಉಮರ್ ಸಿದ್ದಿಕಿ, ಅಝಾರುದ್ದೀನ್ ಕುರೇಶಿ, ಅಹಮದ್ ಹುಸೇನ್, ಫಕ್ರುದ್ದೀನ್, ಮೊಹಮ್ಮದ್ ಇಫ್ತೆಖರ್ ಆಲಂ, ಹಾಗೂ ಓರ್ವ ಅಪ್ರಾಪ್ತನನ್ನು ಬಂಧಿಸಲಾಗಿತ್ತು. ಅಪ್ರಾಪ್ತನ ವಿವರಗಳನ್ನು ಪೊಲೀಸರು ಗೌಪ್ಯವಾಗಿರಿಸಿದ್ದರು. 2017ರ ಅಕ್ಟೋಬರ್ 12ರಂದು ಬಾಲಾಪರಾಧ ನ್ಯಾಯಮಂಡಳಿಯು ಸರಣಿ ಸ್ಫೋಟದಲ್ಲಿ ಅಪ್ರಾಪ್ತ ಭಾಗಿಯಾಗಿದ್ದಾನೆ ಎಂದು ಹೇಳುವ ಮೂಲಕ 3 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.