ಭಾರತದಲ್ಲಿ ಸುನಾಮಿ ಅಂದ್ರೆ ನೆನಪಿಗೆ ಬರುವುದು ತಮಿಳುನಾಡಿನಲ್ಲಾದ 2004ರ ಸುನಾಮಿ. ಸಾವಿರಾರು ಜನರು ಭಯಂಕರ ಸುನಾಮಿಯ ಹೊಡೆತಕ್ಕೆ ಸಿಕ್ಕು ಸತ್ತು ಹೋಗಿದ್ದರು. ಇದನ್ನು ಕಂಡು ಅಂದು ಜಗತ್ತೇ ಬೆಚ್ಚಿ ಬಿದ್ದಿತ್ತು. ಆದ್ರೀಗ ತಮಿಳುನಾಡಿನ ಆರೋಗ್ಯ ಕಾರ್ಯದರ್ಶಿ ರಾಧಾಕೃಷ್ಣನ್
2004 ರ ಸುನಾಮಿ ಸಂದರ್ಭದಲ್ಲಿ ರಕ್ಷಿಸಲ್ಪಟ್ಟ ಹುಡುಗಿಯ ವಿವಾಹವನ್ನು ನಡೆಸುವ ಮೂಲಕ ತಮಿಳುನಾಡಿನ ಜನರ ಮನಸ್ಸನ್ನು ಗೆದಿದ್ದಾರೆ.
ಸುನಾಮಿಯ ಸಂದರ್ಭದಲ್ಲಿ, ರಾಧಾಕೃಷ್ಣನ್ ಅವರು ಸಾರ್ವಜನಿಕರು ಮತ್ತು ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಸಾಮೂಹಿಕ ರಕ್ಷಣಾ ಕಾರ್ಯಾಚರಣೆ ನಡೆಸಿ 99 ಮಕ್ಕಳನ್ನು ರಕ್ಷಿಸಿದ್ದರು. ಅವರು ಮೂರು ತಿಂಗಳ ಮೀನಾ ಮತ್ತು ಒಂಬತ್ತು ತಿಂಗಳ ಸೌಮ್ಯಾ ಅವರನ್ನು ದತ್ತು ಪಡೆದರು. ರಾಧಾಕೃಷ್ಣ ನಂತರ ನಾಗಪಟ್ಟಣಂನ ಕಲೆಕ್ಟರ್ ಆಗಿ ನೇಮಕಗೊಂಡರು ಮತ್ತು ರಕ್ಷಣಾ ಮತ್ತು ಪುನರ್ವಸತಿ ಕಾರ್ಯವನ್ನು ಮುನ್ನಡೆಸಿದರು.
ತಂದೆಯಾಗಿ ಬದಲಾದ ಅವರು ಮಕ್ಕಳನ್ನ ಸರ್ಕಾರಿ ಮನೆಯಲ್ಲಿ ಬೆಳೆಸಿದರು. ಆದರೆ ರಾಧಾಕೃಷ್ಣನ್ ಅವರು ವರ್ಗಾವಣೆಯಾದ ನಂತರ ಪ್ರತಿ ತಿಂಗಳು ಅವರನ್ನು ಭೇಟಿ ಮಾಡಿ ಅವರ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಇದೀಗ ಸೌಮ್ಯಾ ಮದುವೆ ಮಾಡಿಸಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಸೌಮ್ಯ, ಅವರು ನನ್ನನ್ನು ತಂದೆಯಂತೆ ನೋಡಿಕೊಂಡರು. ನನಗೆ ಕುಟುಂಬವನ್ನು ನೀಡಿದರು. ನನ್ನ ಮದುವೆಗೆ ಅನೇಕರು ಹಾಜರಾಗಿದ್ದರು, ಸುನಾಮಿಯಲ್ಲಿ ಇಡೀ ಕುಟುಂಬವನ್ನೆ ಕಳೆದುಕೊಂಡ ನನಗೆ ಇದೆಲ್ಲವೂ ಹೊಸದು ಎಂದು ಹೇಳಿದ್ರು.
ನಾವು ಮೊದಲು ಸೇತುವೆಯ ಕೆಳಗೆ ಮೂರು ತಿಂಗಳ ಮಗು ಮೀನಾಳನ್ನು ರಕ್ಷಿಸಿದ್ದೆವು. ನಂತರ ಸೌಮ್ಯಳನ್ನು ರಕ್ಷಿಸಿದ್ವಿ. ಮೀನಾ ಮತ್ತು ಸೌಮ್ಯ ಅವರ ಪೋಷಕರು ಯಾರೆಂದು ನಮಗೆ ಇನ್ನೂ ತಿಳಿದಿಲ್ಲ, ನಮಗೆ ಅವರ ಯಾವುದೇ ಸಂಬಂಧಿಕರು ಸಿಗಲಿಲ್ಲ. ಅವರಿಗಾಗಿ ಯಾರೂ ಇರಲಿಲ್ಲ, ಆದ್ದರಿಂದ ನಾವೇ ಮಕ್ಕಳನ್ನು ದತ್ತು ತೆಗೆದುಕೊಂಡೆವು. ಸೌಮ್ಯ ಈಗ ಬಿಕಾಂ ಮುಗಿಸಿ ಮದುವೆಯಾಗುವುದನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ ಎಂದು ರಾಧಾಕೃಷ್ಣನ್ ಹೇಳಿದರು.