ನವದೆಹಲಿ: 2,000 ರೂ. ಮುಖಬೆಲೆಯ (Rs 2,000 Note) ನೋಟುಗಳನ್ನು ಚಲಾವಣೆಯಿಂದ ವಾಪಸ್ ಪಡೆದಿರುವ ರಿಸರ್ವ್ ಬ್ಯಾಂಕ್ (Reserve Bank of India) ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್(Supreme Court) ಶುಕ್ರವಾರ ನಿರಾಕರಿಸಿದೆ.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ರಾಜೇಶ್ ಬಿಂದಾಲ್ ಅವರ ರಜಾಕಾಲದ ಪೀಠವು ರಿಜಿಸ್ಟ್ರಿ ಸಲ್ಲಿಸಿದ ವರದಿಯನ್ನು ಪರಿಶೀಲಿಸಿತು ಮತ್ತು ಈ ವಿಷಯದಲ್ಲಿ ಯಾವುದೇ ತುರ್ತು ಅಗತ್ಯವಿಲ್ಲ ಎಂದು ಹೇಳಿದೆ.
ಬೇಸಿಗೆ ರಜೆಯ ನಂತರ ಈ ವಿಷಯವನ್ನು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರ ಮುಂದೆ ಇಡುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.
ಅರ್ಜಿದಾರರ ವಕೀಲ ಅಶ್ವಿನಿ ಉಪಾಧ್ಯಾಯ ಅವರು, ಉನ್ನತ ನ್ಯಾಯಾಲಯವು ಇಂತಹ ಪ್ರಮುಖ ವಿಷಯವನ್ನು ಕೈಗೆತ್ತಿಕೊಳ್ಳದಿರುವುದು ತುಂಬಾ ದುರದೃಷ್ಟಕರ ಎಂದು ಹೇಳಿದರು.