ಮಧ್ಯಪ್ರದೇಶದ, ವಿದಿಶಾ ಜಿಲ್ಲೆಯ, ಜವಾತಿ ಗ್ರಾಮದಲ್ಲಿ 2000 ರೂಪಾಯಿಗಳ ಬಾಜಿ ಗೆಲ್ಲಲು ವೃದ್ಧರೊಬ್ಬರು ಚರಂಡಿ ನೀರು ಕುಡಿದಿದ್ದಾರೆ. ಈ ಘಟನೆ ಜನವರಿ 13 ರಂದು ನಡೆದಿದ್ದು, ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವಯೋವೃದ್ಧರಾದ 60 ವರ್ಷದ ಪನ್ನಾಲಾಲ್ ಅವರು ಕುಶ್ವಾಹ ಪ್ರದೇಶದ ಒಂದು ರಸ್ತೆಯಲ್ಲಿ ಹಾದು ಹೋಗುತ್ತಿದ್ದರು. ಈ ನಡುವೆ ಅವರ ಕೈಯ್ಯಲ್ಲಿದ್ದ ವೀಳ್ಯದೆಲೆಯ ತುಂಡೊಂದು ಚರಂಡಿಗೆ ಬಿದ್ದಿದೆ. ಅವರು ಅದನ್ನು ತೆಗೆದುಕೊಂಡು ಶುದ್ಧ ನೀರಿನಿಂದ ತೊಳೆದರು. ಈ ಸಂದರ್ಭದಲ್ಲಿ ಆ ಹಳ್ಳಿಯ ಸರಪಂಚ್ ಉತ್ತಮ್ ಸಿಂಗ್ ಮತ್ತು ಇತರ ಯುವಕರು ಅಲ್ಲಿದ್ದರು.
ವೀಳ್ಯದೆಲೆ ಏಕೆ ತೊಳೆದೆ ಎಂದು ಸರಪಂಚ್ ಜೊತೆ ಇದ್ದ ಯುವಕರ ತಂಡ ಪನ್ನಾಲಾಲ್ ಅವ್ರನ್ನ ಪ್ರಶ್ನಿಸಿದೆ. ಉತ್ಸಾಹದಲ್ಲಿದ್ದ ಪನ್ನಾಲಾಲ್ 1000 ರೂಪಾಯಿ ಕೊಟ್ಟರೆ ಕೊಳಚೆ ನೀರು ಕುಡಿಯುತ್ತೇನೆ ಎಂದಿದ್ದಾರೆ. ಆಗ ಆ ಗುಂಪು ಚರಂಡಿ ನೀರು ಕುಡಿದರೆ 2000 ರೂಪಾಯಿ ಕೊಡುತ್ತೇವೆ ಎಂದು ವೃದ್ಧನ ಬಳಿ ಬೆಟ್ ಕಟ್ಟಿದೆ. ಎರಡು ಸಾವಿರ ಸಿಗುತ್ತದೆ ಎಂಬ ಆಸೆಯಲ್ಲಿ ಪನ್ನಾಲಾಲ್ ಚರಂಡಿ ನೀರು ಕುಡಿದಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಮಾತಾನಾಡಿರುವ ಸರಪಂಚ್ ಉತ್ತಮ್ ಸಿಂಗ್, ಬಾಜಿಯಲ್ಲಿ ಗೆದ್ದರೆ ದುಡ್ಡು ಸಿಗುತ್ತದೆ ಎನ್ನುವ ಉತ್ಸಾಹದಿಂದ ಚರಂಡಿ ನೀರು ಕುಡಿದೆ ಎಂದು ಪನ್ನಾಲಾಲ್ ಹೇಳಿದ್ದಾರೆ, ಆದರೆ ಅವರು ಚರಂಡಿ ನೀರು ಕುಡಿಯಲಿಲ್ಲ. ಚರಂಡಿ ಬಳಿ ಇರುವ ಕೊಳವೆಬಾವಿಯಲ್ಲಿ ನೀರು ತೆಗೆದುಕೊಂಡು ಕುಡಿದರು. ಆದರೂ ಅವರಿಗೆ 2000 ರೂ. ಕೊಟ್ಟಿದ್ದೇವೆ ಎಂದಿದ್ದಾರೆ.