ಕೊರೊನಾ ವೈರಸ್ ವಿರುದ್ಧ ಲಸಿಕೆ ಅಭಿಯಾನ ಶುರುವಾಗಿ ಸುಮಾರು 8 ತಿಂಗಳುಗಳು ಕಳೆದಿವೆ. ಈ ಸಮಯದಲ್ಲಿ, ದೇಶದಲ್ಲಿ 50 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. ಲಸಿಕೆಯ ನಂತರ ಉಂಟಾಗುವ ಅಡ್ಡಪರಿಣಾಮಗಳ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
ಹೆಚ್ಚಿನ ಜನರು ಜ್ವರ, ತಲೆನೋವು ಸೇರಿದಂತೆ ಹಲವು ಗಂಭೀರ ಲಕ್ಷಣಗಳನ್ನು ಎದುರಿಸುತ್ತಿದ್ದಾರೆ. ಕೆಲವರಿಗೆ ಲಸಿಕೆಯ ನಂತರ ಯಾವುದೇ ಸಮಸ್ಯೆ ಕಂಡು ಬಂದಿಲ್ಲ. ಭಾರತ ಸರ್ಕಾರ, ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ಲಸಿಕೆಯ ನಂತರ 10 ರೋಗಲಕ್ಷಣಗಳ ಬಗ್ಗೆ ಜಾಗರೂಕರಾಗಿರಲು ಕೇಳಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯ, @COVIDNewsByMIB ಟ್ವಿಟರ್ ಹ್ಯಾಂಡಲ್ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ಯಾವುದೇ ಕೋವಿಡ್ -19 ಲಸಿಕೆಯನ್ನು ಪಡೆದ 20 ದಿನಗಳೊಳಗೆ ಸಂಭವಿಸುವ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದೆಂದು ಟ್ವೀಟ್ ಮಾಡಲಾಗಿದೆ.
ಲಸಿಕೆ ಪಡೆದ 20 ದಿನಗಳೊಳಗೆ,ಉಸಿರಾಟದ ತೊಂದರೆ, ಎದೆ ನೋವು, ತೋಳು, ಕಾಲಿನ ನೋವು, ಕಾಲು-ತೋಳಿನ ಊತ, ವಾಂತಿ ಅಥವಾ ನಿರಂತರ ಹೊಟ್ಟೆ ನೋವು, ಇಂಜೆಕ್ಷನ್ ಸ್ಥಳದಿಂದ ಚರ್ಮದ ಮೇಲೆ ರಕ್ತದ ಸಣ್ಣ ಅಥವಾ ದೊಡ್ಡ ಕುರುಹುಗಳು, ಮಸುಕಾದ ದೃಷ್ಟಿ ಅಥವಾ ಕಣ್ಣುಗಳಲ್ಲಿ ನೋವು. ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಿರಂತರವಾಗಿ ವಾಂತಿ, ದೇಹದ ಯಾವುದೇ ಭಾಗದಲ್ಲಿ ದುರ್ಬಲತೆ, ತೀವ್ರ ಅಥವಾ ನಿರಂತರ ತಲೆನೋವು ಸೇರಿದಂತೆ ಬೇರೆ ಯಾವುದೇ ಸಮಸ್ಯೆ ನಿರಂತರವಾಗಿ ಕಾಡಿದರೆ ಎಚ್ಚೆತ್ತುಕೊಳ್ಳುವಂತೆ ಹೇಳಲಾಗಿದೆ. ತಕ್ಷಣ ವೈದ್ಯರನ್ನು ಭೇಟಿಯಾಗುವಂತೆ ಸಲಹೆ ನೀಡಲಾಗಿದೆ.
ಲಸಿಕೆ ಪಡೆದ ನಂತ್ರ ಎರಡು ದಿನಗಳ ಕಾಲ, ತಲೆನೋವು, ಲಸಿಕೆ ಪಡೆದ ಜಾಗದಲ್ಲಿ ನೋವು ಅಥವಾ ಊತ, ಸೌಮ್ಯ ಜ್ವರ, ಕಿರಿಕಿರಿ ಕಾಡುವುದು ಸಾಮಾನ್ಯ. ಕೆಲವು ದಿನಗಳಲ್ಲಿ ಅಡ್ಡಪರಿಣಾಮ ದೂರವಾಗುತ್ತದೆ. ಇದು ವಾರಕ್ಕಿಂತ ಹೆಚ್ಚು ಸಮಯವಿದ್ದಲ್ಲಿ ವೈದ್ಯರನ್ನು ಭೇಟಿಯಾಗುವುದು ಅವಶ್ಯಕವೆಂದು ಸರ್ಕಾರ ಹೇಳಿದೆ.