ಮತ್ತೊಮ್ಮೆ ಸಾಮಾಜಿಕ ಜಾಲತಾಣದ ಮಾನವೀಯ ಮುಖದ ಪರಿಚಯವಾಗಿದೆ. 20 ವರ್ಷಗಳ ಹಿಂದೆ ಕಳೆದು ಹೋಗಿದ್ದ ತಾಯಿ ಜಾಲತಾಣದ ಮೂಲಕವೇ ಆಕೆಯ ಮಗಳಿಗೆ ಸಿಕ್ಕಿದ್ದಾಳೆ. ಸದ್ಯ ಆಕೆ ಪಾಕಿಸ್ತಾನದಲ್ಲಿದ್ದು, ಅವಳನ್ನು ಭಾರತಕ್ಕೆ ಕರೆತರಲು ಸಹಾಯ ಮಾಡುವಂತೆ ಪುತ್ರಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದಾಳೆ.
ಮುಂಬೈ ನಿವಾಸಿಯಾಗಿರುವ ಯಾಸ್ಮಿನ್ ಶೇಕ್ ಎಂಬ ಮಹಿಳೆಯ ತಾಯಿ ಅಡುಗೆ ಕೆಲಸಕ್ಕಾಗಿ ದುಬೈಗೆ ತೆರಳಿದ್ಲು. ಆದ್ರೆ ವರ್ಷಗಳೇ ಕಳೆದರೂ ಮುಂಬೈಗೆ ಮರಳಿ ಬರಲೇ ಇಲ್ಲ. 20 ವರ್ಷಗಳಿಂದ ಯಾಸ್ಮಿನ್ ತಾಯಿಯನ್ನು ನೋಡಿರಲಿಲ್ಲ. ಆಕೆ ಎಲ್ಲಿದ್ದಾಳೆ? ಹೇಗಿದ್ದಾಳೆ ಎಂಬ ಬಗ್ಗೆ ಯಾವುದೇ ಮಾಹಿತಿಯೂ ಸಿಕ್ಕಿರಲಿಲ್ಲ.
ಆದ್ರೀಗ ಪಾಕಿಸ್ತಾನದ ಸಾಮಾಜಿಕ ಜಾಲತಾಣವೊಂದರಲ್ಲಿ ಆಕೆಯ ವಿಡಿಯೋ ಸಿಕ್ಕಿದೆ. ತನ್ನ ಪತಿ, ಮಕ್ಕಳು ಹಾಗೂ ಸೋದರಿಯರ ಹೆಸರನ್ನೆಲ್ಲ ಆಕೆ ವಿಡಿಯೋದಲ್ಲಿ ಉಲ್ಲೇಖಿಸಿದ್ದಾಳೆ. ಆ ಮಹಿಳೆಯ ಹೆಸರು ಹಮೀದಾ ಬಾನು. ಕೆಲಸಕ್ಕಾಗಿ ಏಜೆಂಟ್ ಒಬ್ಬಳ ಜೊತೆಗೆ 2-4 ವರ್ಷಗಳ ಅವಧಿಗಾಗಿ ಆಗಾಗ ಕತಾರ್‌ಗೆ ತೆರಳುತ್ತಿದ್ದಳಂತೆ.
ಅದೇ ರೀತಿ 20 ವರ್ಷಗಳ ಹಿಂದೆ ಕೆಲಸಕ್ಕೆ ತೆರಳಿದ್ದ ಹಮೀದಾ ವಾಪಸ್ ಬಂದಿರಲಿಲ್ಲ. ಏಜೆಂಟ್ ಕೂಡ ಹಮೀದಾಳ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿರಲಿಲ್ಲ. ಆಕೆ ಕುಟುಂಬದೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಇಷ್ಟಪಡುತ್ತಿಲ್ಲವೆಂದು ಸುಳ್ಳು ಹೇಳಿದ್ದಳು. ಇದೀಗ 20 ವರ್ಷಗಳ ಬಳಿಕ ಹಮೀದಾ ಪತ್ತೆಯಾಗಿದ್ದು, ಅವಳನ್ನು ಭಾರತಕ್ಕೆ ಕರೆತರುವಂತೆ ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.