ನೀವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಲು ದಾರಿಹೋಕರಲ್ಲಿ ಕೇಳಿಕೊಂಡು ಹೋಗಬೇಕಿಲ್ಲ. ಗೂಗಲ್ ಮ್ಯಾಪ್ ಬಳಸಿ ನಿಮ್ಮ ದಾರಿಯನ್ನು ಕಂಡುಕೊಳ್ಳಬಹುದು ಎಂಬುದು ನಿಮಗೆ ಗೊತ್ತೇ ಇದೆ.
ಕೆಲವೊಮ್ಮೆ ಗೂಗಲ್ ಮ್ಯಾಪ್ ದಾರಿ ತಪ್ಪಿಸಿದ ಅನೇಕ ಘಟನೆಗಳು ಕೂಡ ನಡೆದಿವೆ. ಇದೀಗ ಇದೇ ಗೂಗಲ್ ಮ್ಯಾಪ್ ಪೊಲೀಸರಿಗೆ ಸಹಾಯ ಮಾಡಿದೆ. ಅದು ಹೇಗೆ ಅಂತೀರಾ..? ಈ ಸ್ಟೋರಿ ಓದಿ.
ಹೌದು, ಮಾಫಿಯಾ ಡಾನ್ ಅನ್ನು ಹಿಡಿಯಲು ಇಟಲಿ ಪೊಲೀಸರಿಗೆ ಗೂಗಲ್ ನಕ್ಷೆಗಳು ಸಹಾಯ ಮಾಡಿದೆ. ಗೂಗಲ್ ಮ್ಯಾಪ್ಸ್ ಅಪ್ಲಿಕೇಶನ್‌ನ ಸಹಾಯದಿಂದ ಸುಮಾರು 20 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಮಾಫಿಯಾ ಕಿಂಗ್ ಪಿನ್ ಅನ್ನು ಇಟಲಿಯ ಪೊಲೀಸರು ಹಿಡಿದಿದ್ದಾರೆ.
61 ವರ್ಷದ ಗಿಯೊಚಿನೊ ಗ್ಯಾಮಿನೊ ಎಂಬಾತ ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿ ಸ್ಪೇನ್‌ನ ಗಲಾಪಗರ್‌ನಲ್ಲಿ ನಕಲಿ ಹೆಸರಿನಲ್ಲಿ ವಾಸಿಸುತ್ತಿದ್ದ. ಈ ಪಟ್ಟಣವು ರಾಜಧಾನಿ ಮ್ಯಾಡ್ರಿಡ್‌ಗೆ ಸಮೀಪದಲ್ಲಿದೆ.
ಕಳೆದ ಹಲವಾರು ವರ್ಷಗಳಿಂದ ಈತನನ್ನು ಹುಡುಕುತ್ತಿದ್ದ ಪೊಲೀಸರಿಗೆ, ಒಂದು ಹಣ್ಣಿನ ಅಂಗಡಿಯ ಮುಂದೆ ಆತನನ್ನೇ ಹೋಲುವ ವ್ಯಕ್ತಿ ನಿಂತಿರುವಂತೆ ಗೂಗಲ್ ನಕ್ಷೆಯ ಫೋಟೋಗ್ರಾಮ್ ನಲ್ಲಿ ಕಂಡಿದೆ. ಈ ಚಿತ್ರವು ಪೊಲೀಸರಿಗೆ ಆಳವಾದ ತನಿಖೆಯನ್ನು ಮಾಡಲು ಪ್ರೇರೇಪಿಸಿತು.
ಗ್ಯಾಮಿನೊ ಸ್ಟಿಡ್ಡಾ ಎಂದು ಕರೆಯಲ್ಪಡುವ ಸಿಸಿಲಿಯನ್ ಮಾಫಿಯಾ ಗುಂಪಿನ ಸದಸ್ಯ, 2002ರಲ್ಲಿ ರೋಮ್‌ನ ರೆಬಿಬ್ಬಿಯಾ ಜೈಲಿನಿಂದ ತಪ್ಪಿಸಿಕೊಂಡಿದ್ದ. ಇದೀಗ ಆರೋಪಿ ಗ್ಯಾಮಿನೊನನ್ನು ಸ್ಪೇನ್‌ನಲ್ಲಿ ಬಂಧಿಸಲಾಗಿದೆ.