ಆಗ್ರಾ: ಉತ್ತರ ಪ್ರದೇಶದ ಆಗ್ರಾದಲ್ಲಿ ಜಾಮೂನು ನೀಡುವ ನೆಪದಲ್ಲಿ ಏಕಾಂತ ಸ್ಥಳಕ್ಕೆ ಬಾಲಕಿಯನ್ನು ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.
ಆಗ್ರಾದ ಶಂಶಾಬಾದ್ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದೆ. ಪೋಷಕರು ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಹೋಗಿದ್ದರು. ಮನೆಯಲ್ಲಿ 13 ವರ್ಷದ ಬಾಲಕಿ ಒಬ್ಬಂಟಿಯಾಗಿ ಇರುವುದನ್ನು ಗಮನಿಸಿದ 13 ವರ್ಷದ ಬಾಲಕ ಜಾಮೂನು ಕೊಡುವುದಾಗಿ ಹೇಳಿ ಆಕೆಯನ್ನು ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾನೆ. ಸ್ಥಳದಲ್ಲಿ ಮೊದಲೇ ಇದ್ದ 22 ವರ್ಷದ ಆರೋಪಿ ಸಂಜು ಹಾಗೂ ಬಾಲಕ ಸೇರಿಕೊಂಡು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಘಟನೆಯ ನಂತರದಲ್ಲಿ ಸಂಜು ಸಹೋದರ 35 ವರ್ಷದ ಮುನ್ನಾ ದೂರು ನೀಡದಂತೆ ಬಾಲಕಿಯ ತಂದೆಗೆ ಕೊಲೆ ಬೆದರಿಕೆ ಹಾಕಿದ್ದಾನೆ. ಈ ಮಾಹಿತಿ ಪೊಲೀಸರಿಗೆ ಗೊತ್ತಾಗಿದ್ದು ಶಂಶಾಬಾದ್ ಠಾಣೆ ಪೊಲೀಸರು ಬಾಲಕಿಯ ಹೇಳಿಕೆ ಪಡೆದುಕೊಂಡು ಐಪಿಸಿ ಮತ್ತು ಪೋಕ್ಸೋ ಕಾಯ್ದೆ ಸಂಬಂಧಿತ ಸೆಕ್ಷನ್ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿ ಬಾಲಪರಾಧಿ ನ್ಯಾಯಮಂಡಳಿಯ ಮುಂದೆ ಹಾಜರುಪಡಿಸಿದ್ದಾರೆ.