ಬೆಂಗಳೂರು: ಮುಂದಿನ ಎರಡು ವರ್ಷ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಬಂದ್ ಮಾಡುವ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಈ ಕುರಿತಾಗಿ ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆದಿದೆ. ಸಾರ್ವತ್ರಿಕ ವರ್ಗಾವಣೆಗೆ ಮುಂದಾದರೆ ಮೂರು, ನಾಲ್ಕು ತಿಂಗಳ ಕಾಲ ಅಭಿವೃದ್ಧಿ ಕಾರ್ಯ ಸ್ಥಗಿತಗೊಳ್ಳುತ್ತವೆ. ವರ್ಗಾವಣೆ ಬಯಸಿದ ನೌಕರರು ಸ್ಥಳ ಹುಡುಕಿಕೊಳ್ಳುವುದರಲ್ಲಿ ಸಮಯ ಕಳೆಯುತ್ತಾರೆ. ಕಾರ್ಯಕ್ಷೇತ್ರ ಬಿಟ್ಟು ಬೆಂಗಳೂರಿಗೆ ಅಲೆದಾಡುತ್ತಾರೆ. ಹೀಗಾಗಿ ಮುಂದಿನ ಎರಡು ವರ್ಷಗಳ ಕಾಲ ವರ್ಗಾವಣೆ ಮಾಡದೆ ಅಭಿವೃದ್ಧಿಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಸಚಿವಾಲಯದಲ್ಲಿ ಚಿಂತನೆ ನಡೆದಿದೆ.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ನಂತರ ಶೇಕಡ 6ರ ಮಿತಿಯೊಳಗೆ ವರ್ಗಾವಣೆಗೆ ಆದೇಶ ನೀಡಲಾಗಿದ್ದು, ಆ ಮಿತಿ ಮೀರಿ ವರ್ಗಾವಣೆ ನಡೆಸಲಾಗಿದೆ. ಅಲ್ಲದೇ ವರ್ಗಾವಣೆಯಲ್ಲಿ ಸಾವಿರಾರು ಕೋಟಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೂಡ ಕೇಳಿ ಬಂದಿವೆ.
ವರ್ಗಾವಣೆಗಾಗಿ ನೌಕರರು ಅಲೆದಾಡುವುದರಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ. ವರ್ಗಾವಣೆ ಸಂದರ್ಭದಲ್ಲಿ ಮಧ್ಯವರ್ತಿಗಳ ಹಾವಳಿ ಇದ್ದು, ಎರಡು ವರ್ಷ ವರ್ಗಾವಣೆ ನಿಷೇಧಿಸಿದರೆ ಇವೆಲ್ಲವುಗಳಿಗೆ ಕಡಿವಾಣ ಹಾಕಬಹುದು ಚಿಂತನೆ ನಡೆದಿದೆ ಎನ್ನಲಾಗಿದೆ.