ಮಧ್ಯಪ್ರದೇಶದ ಅಲಿರಾಜ್ಪುರ ಜಿಲ್ಲೆಯಲ್ಲಿ ಮಾಜಿ ಸರಪಂಚ್ ನ ಇಬ್ಬರು ಪತ್ನಿಯರು ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಿದ್ದು, ಅಚ್ಚರಿ ಎಂದರೆ ಮೂರನೇ ಹೆಂಡತಿಯೂ ಚುನಾವಣೆಯಲ್ಲಿ ಸ್ಪರ್ಧಿಸಬೇಕೆಂದು ಆ ಮಾಜಿ ಸರಪಂಚ್ ಬಯಸಿದ್ದರು. ಆದರೆ ಆಕೆ ಶಿಕ್ಷಣ ಇಲಾಖೆಯಲ್ಲಿ ಸಹಾಯಕರಾಗಿ ಲಸ ಮಾಡುವುದನ್ನು ಬಿಡಬೇಕಾಗಿತ್ತು. ಹೀಗಾಗಿ ಸ್ಪರ್ಧೆಯ ಗೋಜಿಗೆ ಹೋಗಲಿಲ್ಲ.
35 ವರ್ಷದ ಸಾಮ್ರಾಟ್ ಮೋರಿಯಾ, ಸಕ್ರಿ (25), ಮೇಲಾ (28) ಮತ್ತು ನಾನಿ ಬಾಯಿ (30) ಅವರನ್ನು ವಿವಾಹವಾಗಿದ್ದಾರೆ. ಅಲಿರಾಜ್ಪುರ ಪ್ರಧಾನ ಕಚೇರಿಯಿಂದ ಸುಮಾರು 14 ಕಿಲೋಮೀಟರ್ ದೂರದಲ್ಲಿರುವ ನಾನ್ಪುರದಲ್ಲಿ ಈ ಪ್ರಕರಣ ನಡೆದಿದೆ. ಮೂರನೇ ಮದುವೆಯಾದಾಗಲೇ ಅವರು ಸುದ್ದಿಯಾಗಿದ್ದರು.
ನಾನು 2003ರಲ್ಲಿ ನಾನಿ ಬಾಯಿ (ಶಿಕ್ಷಣ ಇಲಾಖೆಯಲ್ಲಿ ಪ್ಯೂನ್), 2008ರಲ್ಲಿ ಮೇಲಾ ಮತ್ತು 2017 ರಲ್ಲಿ ಸಕ್ರಿ ಅವರನ್ನು ವಿವಾಹವಾದೆ. ಈ ವರ್ಷ ಏಪ್ರಿಲ್ 30 ರಂದು ಬೃಹತ್ ಸಭೆಯೊಂದಿಗೆ ಔಪಚಾರಿಕ ವಿವಾಹವನ್ನು ನಡೆಸಲಾಯಿತು ಎಂದು ಅವರು ಹೇಳಿದ್ದಾರೆ.
ಇಲ್ಲಿನ ಜನರು ನನ್ನನ್ನು ಮತ್ತು ನನ್ನ ಹೆಂಡತಿಯರನ್ನು ಪ್ರೀತಿಸುತ್ತಾರೆ. ತಮ್ಮ ಆಶೀರ್ವಾದವನ್ನು ನನ್ನ ಕುಟುಂಬಕ್ಕೆ ಧಾರೆಯೆರೆದಿದ್ದಾರೆ. ನಾನು ನನ್ನ ಮೂವರು ಹೆಂಡತಿಯರೊಂದಿಗೆ ಒಂದು ಸಣ್ಣ ಕೋಣೆಯಲ್ಲಿ ಸಾಮರಸ್ಯದಿಂದ ವಾಸಿಸುತ್ತಿದ್ದೇನೆ. ನಾವು ಎಲ್ಲಾ ಕಾರ್ಯಗಳಿಗೆ ಒಟ್ಟಿಗೆ ಹಾಜರಾಗುತ್ತೇವೆ ಎಂದು ಅವರು ಹೇಳಿದ್ದಾರೆ.
ಮೂವರು ಪುತ್ರರು ಮತ್ತು ಮೂವರು ಪುತ್ರಿಯರನ್ನು ಹೊಂದಿರುವ ಸಾಮ್ರಾಟ್ ಅವರು ಸಕ್ರಿಯ ಬಿಜೆಪಿ ಕಾರ್ಯಕರ್ತರಾಗಿದ್ದಾರೆ.