ಕೋವಿಡ್-19 ಸೋಂಕಿನ ಮೇಲೆ ಲಸಿಕೆ ಅದ್ಯಾವ ಮಟ್ಟದಲ್ಲಿ ಪರಿಣಾಮ ಬೀರುತ್ತಿದೆ ಎಂದು ಅನೇಕರಿಗೆ ಪ್ರಶ್ನೆಗಳು ಎದ್ದಿರುವುದು ಸಹಜ. ಹೊಸ ಅಧ್ಯಯನವೊಂದರ ಪ್ರಕಾರ, ಈ ಹಿಂದೆ ಕೋವಿಡ್‌ಗೆ ಸೋಂಕಿತರಾಗಿ, ಎರಡೂ ಚುಚ್ಚುಮದ್ದುಗಳನ್ನು ಪಡೆದ ವ್ಯಕ್ತಿಗೆ ಒಂದು ವರ್ಷದ ಮಟ್ಟಿಗೆ ಸೋಂಕಿನ ವಿರುದ್ಧ 90% ದಷ್ಟು ರಕ್ಷಣೆ ಸಿಗಲಿದೆ.
ಯುಕೆ ಹೆಲ್ತ್ ಸೆಕ್ಯೂರಿಟಿ ಏಜೆನ್ಸಿ ನಡೆಸಿದ ಸಂಶೋಧನೆ ಅನ್ವಯ, ಕೋವಿಡ್ ಸೋಂಕಿಗೆ ತುತ್ತಾಗುವುದು ಮತ್ತು ಲಸಿಕೆಯ ಎರಡು ಚುಚ್ಚುಮದ್ದುಗಳು, ಭವಿಷ್ಯದಲ್ಲಿ ರೋಗ ಲಕ್ಷಣಗಳುಳ್ಳ ಹಾಗೂ ಉಳ್ಳದೇ ಇರುವ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ.
ಈ ಹಿಂದೆ ಸೋಂಕಿಗೆ ತುತ್ತಾಗಿದ್ದ ಅನುಭವವು ಲಸಿಕೆಯ ಎರಡೂ ಚುಚ್ಚುಮದ್ದುಗಳನ್ನು ಪಡೆದ ಮಂದಿಗೆ ಮಾತ್ರವೇ ರಕ್ಷಣೆ ನೀಡಲಿದೆ. ಈ ಎರಡು ವಿಷಯಗಳು ನಿಮ್ಮನ್ನು ಕೋವಿಡ್‌ನಿಂದ ಸುರಕ್ಷಿತವಾಗಿ ಇಡಬಲ್ಲವು.
ಈ ಅಧ್ಯಯನಕ್ಕಾಗಿ 35,000 ದಷ್ಟು ಆರೋಗ್ಯ ಸೇವಾ ಸಿಬ್ಬಂದಿಯನ್ನು ಪರೀಕ್ಷೆ ಮಾಡಲಾಗಿದೆ. ಲಸಿಕೆ ಪಡೆಯದೇ, ಕೋವಿಡ್‌ಗೆ ಒಮ್ಮೆ ಸಿಲುಕಿದವರಲ್ಲಿ ವೈರಸ್‌ನಿಂದ ಬಚಾವಾಗುವ 85% ಸಾಧ್ಯತೆಯು 3-9 ತಿಂಗಳ ಮಟ್ಟಿಗೆ ಇರಲಿದೆ. ಆದರೆ 15 ತಿಂಗಳ ನಂತರ ಕೋವಿಡ್‌ನಿಂದ ಪಾರಾಗುವ ಸಾಧ್ಯತೆ 73 ಪ್ರತಿಶತಕ್ಕೆ ಇಳಿಯಲಿದೆ.
ಇದೇ ವೇಳೆ, ಲಸಿಕೆ ಪಡೆದ ಮಂದಿಯಲ್ಲಿ 3-9 ತಿಂಗಳ ಮಟ್ಟಿಗೆ ಕೋವಿಡ್‌ನಿಂದ ಪಾರಾಗುವ ಸಾಧ್ಯತೆ 91% ಇರುತ್ತದೆ ಎಂದು ಅಧ್ಯಯನ ತಿಳಿಸಿದೆ. 15 ತಿಂಗಳ ಬಳಿಕವೂ ಇಂಥ ವ್ಯಕ್ತಿಗೆ ಸೋಂಕಿನಿಂದ ಪಾರಾಗುವ ಸಾಧ್ಯತೆ 90%ನಷ್ಟು ಇರುತ್ತದೆ ಎಂದು ಅಧ್ಯಯನ ತಿಳಿಸುತ್ತದೆ.
ಕೊರೋನಾ ಸೋಂಕಿತ ಮಂದಿಯಲ್ಲಿ ವೈರಾಣು ವಿರುದ್ಧ ರೋಗ ನಿರೋಧಕ ಶಕ್ತಿ ಉತ್ಪತ್ತಿಯಾಗಲಿದ್ದು, ಇದೇ ವ್ಯಕ್ತಿ ಲಸಿಕೆಯನ್ನೂ ಪಡೆದಲ್ಲಿ, ಕೋವಿಡ್ ವಿರುದ್ಧ ಹೋರಾಡುವ ಅವರ ಕ್ಷಮತೆಯಲ್ಲಿ ತೀವ್ರವಾದ ಏರಿಕೆ ಕಾಣುತ್ತದೆ ಎಂದು ಯುಕೆ ಹೆಲ್ತ್ ಸೆಕ್ಯೂರಿಟಿ ಏಜೆನ್ಸಿಯ ಮುಖ್ಯ ವೈದ್ಯಕೀಯ ಸಲಹೆಗಾತಿ ಡಾ. ಸುಜ಼ೇನ್ ಹಾಪ್ಕಿನ್ಸ್ ತಿಳಿಸಿದ್ದಾರೆ.