ಬೆಂಗಳೂರು: ಬರದಿಂದ ಸಂಕಷ್ಟದಲ್ಲಿರುವ ರೈತರಿಗೆ ಮೊದಲ ಹಂತದಲ್ಲಿ 2000 ರೂ. ಬರ ಪರಿಹಾರ ಹಣ ಜಮಾ ಮಾಡಲಾಗಿದೆ. ಇದುವರೆಗೆ 33 ಲಕ್ಷ ರೈತರ ಖಾತೆಗೆ ತಲಾ ಎರಡು ಸಾವಿರ ರೂಪಾಯಿ ಬರ ಪರಿಹಾರ ಹಣ ಜಮಾ ಮಾಡಿದ್ದು, ದಾಖಲೆಗಳ ಸಮಸ್ಯೆಯಿಂದ ಇನ್ನೂ 1.66 ಲಕ್ಷ ರೈತರಿಗೆ ಪರಿಹಾರ ನೀಡುವುದು ಬಾಕಿ ಇದೆ.
ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. 33 ಲಕ್ಷ ರೈತರಿಗೆ 628 ಕೋಟಿ ರೂ. ಪರಿಹಾರ ಹಣ ಸಂದಾಯವಾಗಿದ್ದು, ಇನ್ನುಳಿದ 1.66 ಲಕ್ಷ ರೈತರಿಗೆ ಸುಮಾರು 30 ಕೋಟಿ ರೂ.ನಷ್ಟು ಪರಿಹಾರ ಮಾತ್ರ ತಲುಪಬೇಕಿದೆ ಎಂದು ತಿಳಿಸಿದ್ದಾರೆ.
ಸರಿಯಾದ ದಾಖಲೆ ಪಡೆದು ರೈತರಿಗೆ ಹಣ ನೀಡಲಾಗುವುದು. ಪ್ರತಿ ಗ್ರಾಮ ಪಂಚಾಯಿತಿಯಲ್ಲಿಯೂ ಪರಿಹಾರ ಪಡೆದ ರೈತರ ಪಟ್ಟಿ ಪ್ರಕಟಿಸಲು ಸೂಚಿಸಲಾಗಿದೆ. ರೈತರ ಹೆಸರು ಕೈಬಿಟ್ಟು ಹೋಗಿದ್ದಲ್ಲಿ ಸ್ಥಳೀಯ ಕೃಷಿ ಇಲಾಖೆ, ಕಂದಾಯ ಇಲಾಖೆ ಕಚೇರಿ ಸಂಪರ್ಕಿಸಬಹುದಾಗಿದೆ ಎಂದು ಹೇಳಿದ್ದಾರೆ.