ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉರಿ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಒಳನುಸುಳುವಿಕೆ ಯತ್ನವನ್ನು ಭದ್ರತಾ ಪಡೆಗಳು ಭಾನುವಾರ ತಡೆದಿದ್ದು, ಇಬ್ಬರು ಭಯೋತ್ಪಾದಕರನ್ನು ಕೊಂದಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಎಲ್‌ಒಸಿಯಾದ್ಯಂತ ಹೆಚ್ಚು ಶಸ್ತ್ರಸಜ್ಜಿತ ಭಯೋತ್ಪಾದಕರು ಉರಿ ಸೆಕ್ಟರ್‌ನಲ್ಲಿ ಒಳನುಸುಳುವ ಸಾಧ್ಯತೆಯ ನಿರ್ದಿಷ್ಟ ಮಾಹಿತಿ ಮತ್ತು ಜೆ-ಕೆ ಪೋಲೀಸ್ ಇನ್‌ಪುಟ್‌ಗಳ ಆಧಾರದ ಮೇಲೆ, ಸೈನಿಕರನ್ನು ಹೆಚ್ಚಿನ ಅಲರ್ಟ್‌ನಲ್ಲಿ ಇರಿಸಲಾಗಿದೆ ಮತ್ತು ಒಳನುಸುಳುವಿಕೆ ನಿಗ್ರಹ ಗ್ರಿಡ್ ಅನ್ನು ಬಿಗಿಗೊಳಿಸಲಾಗಿದೆ ಎಂದು ಶ್ರೀನಗರ ಮೂಲದ ಸೇನಾ ವಕ್ತಾರರು ತಿಳಿಸಿದ್ದಾರೆ.
ಶನಿವಾರ ನಿರಂತರ ಮಳೆ ಮತ್ತು ಸೀಮಿತ ಗೋಚರತೆ ಹವಾಮಾನದ ಲಾಭವನ್ನು ಪಡೆದುಕೊಂಡು, ಶಸ್ತ್ರಸಜ್ಜಿತ ಭಯೋತ್ಪಾದಕರ ಗುಂಪು ನಿಯಂತ್ರಣ ರೇಖೆಯಾದ್ಯಂತ ಪ್ರವೇಶಿಸಲು ಪ್ರಯತ್ನಿಸಿತು. ತೀವ್ರವಾದ ಗುಂಡಿನ ದಾಳಿ ನಡೆದು ಇಬ್ಬರು ಭಯೋತ್ಪಾದಕರ ನಿರ್ಮೂಲನೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಘಟನಾ ಸ್ಥಳದಲ್ಲಿ ಸಂಪೂರ್ಣ ಹುಡುಕಾಟ ನಡೆಸಲಾಯಿತು, ಎರಡು AK ಸರಣಿಯ ರೈಫಲ್‌ಗಳು, ಆರು ಪಿಸ್ತೂಲ್‌ಗಳು, ನಾಲ್ಕು ಚೀನೀ ಗ್ರೆನೇಡ್‌ಗಳಂತಹ ಭಾರೀ ಶಸ್ತ್ರಾಸ್ತ್ರ ವಶಕ್ಕೆ ಪಡೆಯಲಾಗಿದೆ. ಜೊತೆಗೆ ಕಂಬಳಿಗಳು, ಪಾಕಿಸ್ತಾನಿ ಮತ್ತು ಭಾರತೀಯ ಕರೆನ್ಸಿ ನೋಟುಗಳು, ಪಾಕಿಸ್ತಾನಿ ಔಷಧಗಳು ಮತ್ತು ತಿನ್ನಬಹುದಾದ ಪದಾರ್ಥಗಳನ್ನು ಒಳಗೊಂಡಿರುವ ಎರಡು ಚೀಲ ವಶಕ್ಕೆ ಪಡೆಯಲಾಗಿದೆ.
ಕನಿಷ್ಠ ಇಬ್ಬರು ಭಯೋತ್ಪಾದಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರು ಎಲ್ಒಸಿ ಮೂಲಕ ಪಲಾಯನ ಮಾಡಿರುವ ಸಾಧ್ಯತೆ ಇದೆ. ಹವಾಮಾನ ವೈಪರೀತ್ಯದ ಕಾರಣ ಶೋಧ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದ್ದು, ಮತ್ತೆ ಪುನರಾರಂಭಿಸಲಾಗುವುದು ಎಂದು ಹೇಳಲಾಗಿದೆ.