ರಾಜಸ್ಥಾನದ ಕೋಟಾದಲ್ಲಿ ಭಾನುವಾರ ಇಬ್ಬರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವರ್ಷ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳ ಸಂಖ್ಯೆ ಒಟ್ಟು 24 ಕ್ಕೆ ತಲುಪಿದೆ.
ಮೃತ ವಿದ್ಯಾರ್ಥಿಗಳನ್ನು ಅವಿಷ್ಕಾರ್ ಶಂಬಾಜಿ ಕಾಸ್ಲೆ ಮತ್ತು ಆದರ್ಶ್ ರಾಜ್ ಎಂದು ಗುರುತಿಸಲಾಗಿದೆ.
ಆವಿಷ್ಕಾರ್ ಅವರು ಪರೀಕ್ಷೆ ಬರೆದ ಕೆಲವೇ ನಿಮಿಷಗಳಲ್ಲಿ, ಸುಮಾರು 3.15 ಗಂಟೆಗೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಆರನೇ ಮಹಡಿಯಿಂದ ಜಿಗಿದಿದ್ದಾರೆ. ಸಂಸ್ಥೆಯ ಸಿಬ್ಬಂದಿ ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಈ ಘಟನೆ ಆವರಣದಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದಾದ ಕೆಲವೇ ಗಂಟೆಗಳಲ್ಲಿ ಪರೀಕ್ಷೆ ಬರೆದಿದ್ದ ಬಿಹಾರ ಮೂಲದ ಆದರ್ಶ್ ರಾಜ್ ರಾತ್ರಿ 7 ಗಂಟೆ ಸುಮಾರಿಗೆ ತನ್ನ ಬಾಡಿಗೆ ಫ್ಲಾಟ್‌ನಲ್ಲಿ ನೇಣು ಬಿಗಿದುಕೊಂಡಿದ್ದಾನೆ. ಆತ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಪಡೆಯುವ ಭಯದಲ್ಲಿದ್ದ ಎಂದು ಹೇಳಲಾಗಿದೆ.
ಮಹಾರಾಷ್ಟ್ರದ ಲಾತೂರ್ ಜಿಲ್ಲೆಯ ಆವಿಷ್ಕಾರ್ ಮೂರು ವರ್ಷಗಳಿಂದ ನಗರದಲ್ಲಿ NEET ಯುಜಿಗೆ ತಯಾರಿ ನಡೆಸುತ್ತಿದ್ದರು. ಅಜ್ಜಿಯೊಂದಿಗೆ ತಾಲ್ವಾಂಡಿ ಪ್ರದೇಶದಲ್ಲಿ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು.
ಅವರ ಪೋಷಕರು ಮಹಾರಾಷ್ಟ್ರದ ಸರ್ಕಾರಿ ಶಾಲೆಯ ಶಿಕ್ಷಕರು.
ಘಟನೆಯ ಕುರಿತು ಪ್ರತಿಕ್ರಿಯಿಸಿದ ಪೊಲೀಸ್ ಅಧಿಕಾರಿ, ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ಆರನೇ ಮಹಡಿಯಿಂದ ಬಿದ್ದು ಆವಿಷ್ಕರ್ ಸಾವನ್ನಪ್ಪಿದ್ದಾರೆ ಎಂದು ಖಚಿತಪಡಿಸಿದ್ದಾರೆ.
ಎರಡನೇ ವಿದ್ಯಾರ್ಥಿ ಆದರ್ಶ್ ತನ್ನ ಸೋದರ ಸಂಬಂಧಿಗಳ ಜೊತೆಯಲ್ಲಿಯೇ ಇದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅವರನ್ನು ಕೆಳಗಿಳಿಸುವಾಗ ಅವರು ಉಸಿರಾಡುತ್ತಿದ್ದರು. ಆದರೆ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರು ಸಾವನ್ನಪ್ಪಿದರು.
ಪೊಲೀಸರ ಪ್ರಕಾರ, ವಿದ್ಯಾರ್ಥಿಗಳ ಎರಡೂ ಕೊಠಡಿಗಳಲ್ಲಿ ಯಾವುದೇ ಆತ್ಮಹತ್ಯೆ ಟಿಪ್ಪಣಿಗಳು ಪತ್ತೆಯಾಗಿಲ್ಲ.
ಹೆಚ್ಚಿನ ತನಿಖೆಗಳು ನಡೆಯುತ್ತಿದ್ದು, ಇಬ್ಬರು ವಿದ್ಯಾರ್ಥಿಗಳ ಮೃತದೇಹಗಳನ್ನು ಸೋಮವಾರ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು.
ಏತನ್ಮಧ್ಯೆ, ಮುಂಬರುವ ಎರಡು ತಿಂಗಳಲ್ಲಿ ಯಾವುದೇ ಪರೀಕ್ಷೆಗಳನ್ನು ನಡೆಸದಂತೆ ಕೋಚಿಂಗ್ ಸಂಸ್ಥೆಗೆ ಜಿಲ್ಲಾಧಿಕಾರಿ ಒಪಿ ಬಂಕರ್ ಭಾನುವಾರ ಸೂಚನೆ ನೀಡಿದ್ದಾರೆ. ಕೊಠಡಿಗಳ ಒಳಗಿನ ಎಲ್ಲಾ ಫ್ಯಾನ್‌ಗಳಲ್ಲಿ ಆತ್ಮಹತ್ಯಾ ವಿರೋಧಿ ಸಾಧನಗಳನ್ನು ಅಳವಡಿಸುವಂತೆ ಅವರು ಸಂಸ್ಥೆಗೆ ನಿರ್ದೇಶನ ನೀಡಿದ್ದು, ಯಾವುದೇ ತರಗತಿಗಳು ಮತ್ತು ಪರೀಕ್ಷೆಗಳು ಇಲ್ಲದಿರುವಾಗ ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ‘ಉಚಿತ ದಿನ’ವನ್ನು ಅನುಮತಿಸುವಂತೆ ಸೂಚನೆ ನೀಡಿದ್ದಾರೆ.