ಉತ್ತರಾಖಂಡದಲ್ಲಿ ಸುರಿದ ಭಾರೀ ಮಳೆಗೆ 2 ತಿಂಗಳ ಹಿಂದೆಯಷ್ಟೇ ಉದ್ಘಾಟನೆಯಾಗಿದ್ದ ಸೇತುವೆ ರೂರ್ಕಿಯಲ್ಲಿ ಕೊಚ್ಚಿಕೊಂಡು ಹೋಗಿದೆ. ಭಾನುವಾರ ಸುರಿದ ಧಾರಾಕಾರ ಮಳೆಯ ನಂತರ, ಸೋಲಾನಿ ನದಿಯ ಮೇಲಿನ ಸೇತುವೆ ಕುಸಿದು ಪ್ರವಾಹದ ನೀರಲ್ಲಿ ಕೊಚ್ಚಿಹೋಗಿದೆ.
14,74,000 ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಸೇತುವೆಯು ಹರಿದ್ವಾರಕ್ಕೆ ಸಂಪರ್ಕ ಕಲ್ಪಿಸಿತ್ತು. ಇದೀಗ ಸೇತುವೆ ಕುಸಿದಿರೋದ್ರಿಂದ ಸ್ಥಳೀಯರು ಸಂಪರ್ಕ ಕಳೆದುಕೊಂಡಿದ್ದು ಆತಂಕದಲ್ಲಿದ್ದಾರೆ. ಸೇತುವೆಯನ್ನು ಏಪ್ರಿಲ್ 19, 2023 ರಂದು ಉದ್ಘಾಟಿಸಲಾಗಿತ್ತು.
ನಿರಂತರವಾಗಿ ಸುರಿಯುತ್ತಿರುವ ಮಳೆಯು ಉತ್ತರ ಭಾರತದ ಕೆಲವು ಭಾಗಗಳಲ್ಲಿ ಹಾನಿಯನ್ನುಂಟು ಮಾಡಿದೆ. ಭಾರತೀಯ ಹವಾಮಾನ ಇಲಾಖೆ ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಹತ್ತು ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಿದೆ. ಎಲ್ಲಾ ಪ್ರಮುಖ ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು ಪ್ರವಾಹದಿಂದ ಭೂಕುಸಿತ ಉಂಟಾಗುತ್ತಿದೆ.
ಗುಡ್ಡಗಾಡು ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ ಇದುವರೆಗೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ. ಇನ್ನೆರಡು ದಿನಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯ ಹಿನ್ನೆಲೆಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಜನರು ಅನಗತ್ಯವಾಗಿ ಸಂಚರಿಸದಂತೆ ಮನವಿ ಮಾಡಿಕೊಂಡಿದ್ದಾರೆ.