ಭೋಪಾಲ್: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಧ್ಯಪ್ರದೇಶದ ಇಬ್ಬರು ಕಾಂಗ್ರೆಸ್ ಶಾಸಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪೊಲೀಸರು ದಾಖಲಿಸಿರುವ ಎಫ್‌ಐಆರ್ ಪ್ರಕಾರ, ಶಾಸಕರಾದ ಸುನಿಲ್ ಸರಾಫ್ ಮತ್ತು ಸಿದ್ಧಾರ್ಥ್ ಕುಶ್ವಾಹ ಅವರು ಗುರುವಾರ ರೇವಾಂಚಲ್ ಎಕ್ಸ್ ಪ್ರೆಸ್ ನ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅವರು ಕರ್ಣಿಯಲ್ಲಿ ರೈಲು ಹತ್ತಿದ್ದು, ಮದ್ಯ ಸೇವನೆ ಮಾಡಿದ್ದರು ಎನ್ನಲಾಗಿದೆ.
ತನ್ನ ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ, ಶಾಸಕರ ವರ್ತನೆಯ ಬಗ್ಗೆ ತನ್ನ ಪತಿಗೆ ಫೋನ್‌ನಲ್ಲಿ ಎಚ್ಚರಿಕೆ ನೀಡಿದ್ದಾಳೆ. ಆಕೆಯ ಪತಿ ನಂತರ ರೈಲ್ವೆ ಸಚಿವಾಲಯ ಮತ್ತು ರೈಲ್ವೇ ಪೊಲೀಸರನ್ನು ಸರಣಿ ಟ್ವೀಟ್ ಗಳಲ್ಲಿ ಟ್ಯಾಗ್ ಮಾಡಿದ್ದಾರೆ.
ಆಕೆಯ ದೂರಿನ ಮೇರೆಗೆ ಪ್ರಯಾಣದ ಮಧ್ಯದಲ್ಲಿ ಮಹಿಳೆಯ ಸೀಟನ್ನು ಬದಲಾಯಿಸಲಾಗಿದೆ. ಐಪಿಸಿಯ ಸೆಕ್ಷನ್ 354 ರ ಅಡಿಯಲ್ಲಿ ಪೊಲೀಸರು ಶಾಸಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಅವರು ರೈಲಿನಲ್ಲಿ ತನಗೆ ಕಿರುಕುಳ ನೀಡಿದ್ದಾರೆ ಎಂದು ಮಹಿಳೆಯೊಬ್ಬರು ಆರೋಪಿಸಿರುವ ಸತ್ನಾ ಶಾಸಕ ಸಿದ್ಧಾರ್ಥ್ ಕುಶ್ವಾಹಾ ಮತ್ತು ಕೋಟ್ಮಾ ಶಾಸಕ ಸುನೀಲ್ ಸರಾಫ್ ಅವರಿಂದ ಉತ್ತರ ಕೇಳಿದ್ದಾರೆ. ಈ ಬಗ್ಗೆ ಪರಿಶೀಲಿಸಲು ಕಮಲ್ ನಾಥ್ ಸಮಿತಿಯನ್ನು ರಚಿಸಿದ್ದಾರೆ.