ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಎರಡು ವಿಮಾನಗಳು ಡಿಕ್ಕಿ ಆಗುವ ಘಟನೆ ತಪ್ಪಿದ್ದು, ಅದೃಷ್ಟವಶಾತ್ 426 ಪ್ರಯಾಣಿಕರು ಪಾರಾಗಿದ್ದಾರೆ.
ಜನವರಿ 7ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬೆಂಗಳೂರಿನಿಂದ ಭುವನೇಶ್ವರ ಮತ್ತು ಕೋಲ್ಕತ್ತಾಗೆ ತೆರಳಬೇಕಿದ್ದ ಇಂಡಿಗೋ ವಿಮಾನಗಳು ರನ್ ವೇ ಇಂದ ಒಂದೇ ಸಮಯಕ್ಕೆ ಮೂರು ಸಾವಿರ ಅಡಿಯಷ್ಟು ಮೇಲೇರಿದ್ದು, ಅಪಾಯದ ಸೂಚನೆ ಅರಿತ ಪೈಲಟ್ ಗಳು ಮಾರ್ಗ ಬದಲಿಸಿದ ಪರಿಣಾಮ ಯಾವುದೇ ಅನಾಹುತ ಉಂಟಾಗಿಲ್ಲ.
ಏಕಕಾಲಕ್ಕೆ ಎರಡು ವಿಮಾನಗಳು ರನ್ ವೇಯಿಂದ ಮೇಲೇರಿರುವುದನ್ನು ಗಮನಿಸಿದ ರಾಡಾರ್ ಕಂಟ್ರೋಲ್ ರೂಮ್ ಸಿಬ್ಬಂದಿ ತುರ್ತು ಸಂದೇಶ ರವಾನಿಸಿದ್ದು, ಭುವನೇಶ್ವರಕ್ಕೆ ತೆರಳಬೇಕಿದ್ದ ವಿಮಾನ ಬಲಗಡೆಗೆ ಮತ್ತು ಕೊಲ್ಕತ್ತಾಗೆ ಹೊರಟಿದ್ದ ವಿಮಾನವನ್ನು ಎಡಗಡೆಗೆ ಚಲಿಸಲು ತಿಳಿಸಿ ಅನಾಹುತ ತಪ್ಪಿಸಿದ್ದಾರೆ.
ಅಂದಹಾಗೆ, ಈ ಎರಡು ವಿಮಾನಗಳು ರನ್ ವೇ ಮೇಲೆ 3000 ಅಡಿ ಕ್ರಮಿಸುವವರೆಗೆ ಒಂದೇ ಮಾರ್ಗದಲ್ಲಿ ಸಂಚರಿಸುತ್ತಿರುವುದರ ಬಗ್ಗೆ ವಿಮಾನದ ನಿರ್ವಾಹಕರಿಗೆ ಮಾಹಿತಿ ಇರಲಿಲ್ಲ. ರಾಡರ್ ಕಂಟ್ರೋಲ್ ರೂಮ್ ಸಿಬ್ಬಂದಿ ಸಂಭವಿಸಬಹುದಾಗಿದ್ದ ಅನಾಹುತ ತಪ್ಪಿಸಿದ್ದಾರೆ. DGCA ಈ ಘಟನೆಯ ತನಿಖೆಗೆ ಆದೇಶಿಸಿದೆ ಎನ್ನಲಾಗಿದೆ.