ಉತ್ತರ ಪ್ರದೇಶದ ಉನ್ನಾವೊದಲ್ಲಿ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಮೇವು ತರಲು ಹೊಲಕ್ಕೆ ಹೋಗಿದ್ದ ಮೂವರು ಬಾಲಕಿಯರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಮತ್ತೊಬ್ಬ ಬಾಲಕಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಹುಡುಗಿಯ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಉನ್ನಾವೋದ ಅಶೋಹಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಬುರ್ಹಾ ಗ್ರಾಮದಲ್ಲಿ ಘಟನೆ ನಡೆದಿದೆ. ಉನ್ನಾವೋ ಎಸ್ಪಿ ಸುರೇಶ್ ರಾವ್ ಆನಂದ ಕುಲಕರ್ಣಿ ಕುರಿತು ಮಾಹಿತಿ ನೀಡಿದ್ದು, ಬಾಲಕಿಯರು ಮೇವು ತರಲು ಹೊರಗೆ ಹೋಗಿದ್ದರು. ಬಹಳ ಸಮಯದವರೆಗೆ ಅವರು ಹಿಂತಿರುಗದಿದ್ದಾಗ ಆತಂಕಗೊಂಡ ಕುಟುಂಬದವರು ಜಮೀನಿಗೆ ಹೋದಾಗ ಇಬ್ಬರು ಬಾಲಕಿಯರು ಮೃತಪಟ್ಟಿರುವುದು ಕಂಡು ಬಂದಿದೆ.
ವಿಷಪೂರಿತ ಪದಾರ್ಥ ಸೇವಿಸಿ ಅವರು ಮೃತಪಟ್ಟಿರುವ ಕುರುಹು ಕಂಡುಬಂದಿದೆ. ಘಟನೆಯ ಸ್ಥಳದಲ್ಲಿ ಯಾವುದೇ ಹೋರಾಟದ ಲಕ್ಷಣಗಳು ಕಂಡುಬಂದಿಲ್ಲ. ಬಾಲಕಿಯರ ಸಾವಿನ ಕುರಿತಾಗಿ ತನಿಖೆ ಕೈಗೊಳ್ಳಲಾಗಿದ್ದು ಆರು ತಂಡಗಳನ್ನು ರಚಿಸಲಾಗಿದೆ. ಆಸ್ಪತ್ರೆಗೆ ದಾಖಲಾದ ಬಾಲಕಿ ಚೇತರಿಸಿಕೊಂಡ ಬಳಿಕ ಹೇಳಿಕೆ ಪಡೆಯಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.