ಭೋಪಾಲ್: ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಮಂಗಳವಾರ ಇಬ್ಬರು ದಲಿತ ಪುರುಷರನ್ನು ಪರೇಡ್ ಮಾಡಿ ಅವರ ತಲೆ ಬೋಳಿಸಿರುವ ಅಮಾನವೀಯ ಘಟನೆ ನಡೆದಿದೆ.
ಪೊಲೀಸರ ಪ್ರಕಾರ, ಭಿಂಡ್‌ನ ದಬೋಹಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಂತೋಷ್ ಮತ್ತು ಧರ್ಮೇಂದ್ರ ಶಾಕ್ಯಾ ಸಂತ್ರಸ್ತರು. ಇವರು ದಿಲೀಪ್ ಶರ್ಮಾ ಎಂಬಾತನೊಂದಿಗೆ ಒಂದೂವರೆ ತಿಂಗಳ ಹಿಂದೆ ಜಗಳವಾಡಿದ್ದರು. ಈ ಘರ್ಷಣೆಯಲ್ಲಿ ಶರ್ಮಾ ಅವರಿಗೆ ಗಂಭೀರ ಗಾಯವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಶಾಕ್ಯ ಸಹೋದರರ ವಿರುದ್ಧ ದೂರು ದಾಖಲಿಸಿದ್ದರು. ಸಹೋದರರನ್ನು ಬಂಧಿಸಿ ಜಾಮೀನು ನೀಡಲಾಗಿತ್ತು.
ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವಂತೆ ಶರ್ಮಾ ಅವರ ಅಣ್ಣ ಪ್ರಸ್ತಾಪಿಸಿದ್ದರು. ಗಲಾಟೆಗೆ ಸಂಬಂಧಿಸಿದಂತೆ ‘ಪಂಚಾಯತ್’ ಸಭೆ ನಡೆದಿದ್ದು, ಶರ್ಮಾ ಅವರ ವೈದ್ಯಕೀಯ ವೆಚ್ಚವಾಗಿರುವ ಒಂದೂವರೆ ಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡುವಂತೆ ಸಹೋದರರಿಗೆ ಸೂಚಿಸಲಾಗಿತ್ತು. ಆದರೆ ಪೊಲೀಸರ ಪ್ರಕಾರ, ಶರ್ಮಾ ಮತ್ತು ಅವರ ಸ್ನೇಹಿತರು ಸಹೋದರರ ತಲೆ ಬೋಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಭಿಂದ್ ಹಿರಿಯ ಪೊಲೀಸ್ ಅಧಿಕಾರಿ ಶೈಲೇಂದ್ರ ಸಿಂಗ್ ಚೌಹಾಣ್ ಹೇಳಿದ್ದಾರೆ.