ಕೇಂದ್ರ ಸರ್ಕಾರ ರಚಿಸಿರುವ ರಾಮ ಮಂದಿರ ಟ್ರಸ್ಟ್ ವಿರುದ್ಧ ಉತ್ತರ ಪ್ರದೇಶದ ಎರಡು ಪ್ರಮುಖ ವಿರೋಧ ಪಕ್ಷಗಳು ಭ್ರಷ್ಟಾಚಾರದ ಆರೋಪವನ್ನ ಹೊರಿಸಿವೆ.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಈ ಅವ್ಯವಹಾರ ನಡೆದಿದೆ ಎಂದು ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷಗಳು ಆರೋಪ ಮಾಡಿವೆ. ಇಬ್ಬರು ರಿಯಲ್ ಎಸ್ಟೇಟ್ ಡೀಲರ್ಗಳು 2 ಕೋಟಿ ರೂಪಾಯಿಗೆ ಖರೀದಿಸಿದ ಆಸ್ತಿಯನ್ನ ಕೆಲವೇ ನಿಮಿಷಗಳಲ್ಲಿ ಟ್ರಸ್ಟ್ಗೆ 18.5 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆದರೆ ರಾಮ ಮಂದಿರ ಟ್ರಸ್ಟ್ ವಿಪಕ್ಷಗಳ ಈ ಆರೋಪವನ್ನ ಸಂಪೂರ್ಣ ತಳ್ಳಿ ಹಾಕಿದೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಒಂದು ವರ್ಷ ಬಾಕಿ ಇರುವಾಗಲೇ ವಿಪಕ್ಷಗಳು ಹೊರಿಸಿರುವ ಈ ಆರೋಪ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಸುಪ್ರೀಂ ಕೋರ್ಟ್ ತೀರ್ಪನ್ನ ಆಧರಿಸಿ ರಾಮ ಮಂದಿರ ನಿರ್ಮಾಣ, ಮೇಲ್ವಿಚಾರಣೆ ಹಾಗೂ ನಿರ್ವಹಣೆಗಾಗಿ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಕೇಂದ್ರ ಸರ್ಕಾರು ರಾಮ ಮಂದಿರ ಟ್ರಸ್ಟ್ ರಚನೆ ಮಾಡಿದೆ. ಈ ಟ್ರಸ್ಟ್ನಲ್ಲಿ ಒಟ್ಟು 15 ಮಂದಿ ಸದಸ್ಯರಿದ್ದು ಅದರಲ್ಲಿ 12 ಮಂದಿಯನ್ನ ಕೇಂದ್ರ ಸರ್ಕಾರವೇ ಆಯ್ಕೆ ಮಾಡಿದೆ.
ಭಾನುವಾರ ಈ ಸಂಬಂಧ ಸುದ್ದಿಗೋಷ್ಠಿ ನಡೆಸಿದ ಪವನ್ ಪಾಂಡೆ, ಬಿಜೆಪಿ ಸ್ಥಳೀಯ ಮುಖಂಡರು ರಾಮ ಮಂದಿರ ಟ್ರಸ್ಟ್ನ ಕೆಲ ಸದಸ್ಯರ ಸಹಕಾರದಿಂದ ಈ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಈ ಸಂಬಂಧ ಕೆಲ ದಾಖಲೆಗಳನ್ನೂ ಒದಗಿಸಿರುವ ಪವನ್ ಪಾಂಡೆ ಇದರಲ್ಲಿ ಅಯೋಧ್ಯೆ ಮೇಯರ್ ಹಾಗೂ ಟ್ರಸ್ಟ್ನ ಸದಸ್ಯರು ಸಹಿ ಹಾಕಿದ್ದಾರೆ ಎಂದು ತಿಳಿಸಿದ್ದಾರೆ.
ಕೆಲವೇ ನಿಮಿಷಗಳಲ್ಲಿ ಆಸ್ತಿಯ ಬೆಲೆ 2 ಕೋಟಿಯಿಂದ 18 ಕೋಟಿಗೆ ಏರಿಕೆಯಾಗಿದೆ ಅಂದರೆ ಆ ಭೂಮಿಯಲ್ಲೇನು ಚಿನ್ನ ಎಸೆಯಲಾಯಿತಾ..? ಅಂದರೆ ಇಲ್ಲಿ 16.5 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಈ ಪ್ರಕರಣದ ಸಂಬಂಧ ವಿಚಾರಣೆ ನಡೆಯಲೇಬೇಕು ಎಂದು ಹೇಳಿದ್ದಾರೆ.
ರಾಮ ಮಂದಿರ ಟ್ರಸ್ಟ್ಗೆ ಜನರು ಕೋಟಿಗಟ್ಟಲೇ ಹಣವನ್ನ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆದರೆ ಜನದ ಕಷ್ಟದ ಹಣವನ್ನ ಈ ರೀತಿ ಬಳಕೆ ಮಾಡಿದ್ದೀರಾ ಅಂದರೆ ದೇಶದ 120 ಕೋಟಿ ಜನಕ್ಕೆ ನೀವು ಕೊಟ್ಟ ಗೌರವ ಇದೇನಾ ಎಂದು ಪ್ರಶ್ನೆ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಕೂಡ ಸುದ್ದಿಗೋಷ್ಠಿ ನಡೆಸಿ ರಾಮ ಮಂದಿರ ಟ್ರಸ್ಟ್ ವಿರುದ್ಧ ಭೂ ಅವ್ಯವಹಾರದ ಆರೋಪ ಮಾಡಿದ್ದಾರೆ.
ಶ್ರೀರಾಮನ ಹೆಸರಲ್ಲಿ ಅವ್ಯವಹಾರ ಎಸಗುತ್ತಾರೆ ಅನ್ನೋದನ್ನ ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಈ ದಾಖಲೆಗಳನ್ನ ನೋಡಿದ್ರೆ ಕೋಟಿಗಟ್ಟಲೇ ಅವ್ಯವಹಾರ ನಡೆದಿದೆ ಅನ್ನೋದು ಸ್ಪಷ್ಟ ಎಂದು ಹೇಳಿದ್ದಾರೆ
ಆದರೆ ಈ ಎಲ್ಲಾ ಆರೋಪಗಳನ್ನ ರಾಮಮಂದಿರ ಟ್ರಸ್ಟ್ ತಳ್ಳಿ ಹಾಕಿದೆ. ಈ ರೀತಿಯ ಆರೋಪಗಳು ನಮ್ಮ ದೇಶದಲ್ಲಿ ನಡೆಯುತ್ತಲೇ ಇರುತ್ತದೆ. ಹೀಗಾಗಿ ನಾವು ಇಂತಹ ಆರೋಪಗಳ ವಿರುದ್ಧ ತಲೆಕೆಡಿಸಿಕೊಳ್ಳೋದಿಲ್ಲ. ನೀವೂ ತಲೆಕೆಡಿಸಿಕೊಳ್ಳಬೇಡಿ ಎಂದು ಶ್ರೀರಾಮ ಮಂದಿರ ಟ್ರಸ್ಟ್ನ ಕಾರ್ಯದರ್ಶಿ ಹಾಗೂ ವಿಶ್ವ ಹಿಂದೂ ಪರಿಷತ್ ನಾಯಕ ಚಂಪತ್ ರೈ ಹೇಳಿದ್ದಾರೆ. ಅಲ್ಲದೇ ಈ ಸಂಬಂಧ ಟ್ವೀಟ್ ಕೂಡ ಮಾಡಿರುವ ರೈ, ಈ ಆರೋಪ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿದ್ದಾರೆ.