ನವದೆಹಲಿ: ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿಗೂ ಹೆಚ್ಚು ‘ಪಕ್ಕಾ'(ಕಾಂಕ್ರೀಟ್) ಮನೆಗಳನ್ನು ಸರ್ಕಾರ ನಿರ್ಮಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ. ಈ ಯೋಜನೆ ಬಡವರ ಸಬಲೀಕರಣ ಮತ್ತು ಮಹಿಳಾ ಸಬಲೀಕರಣದ ಸಂಕೇತವಾಗಿದೆ ಎಂದು ಅವರು ಹೇಳಿದ್ದಾರೆ.
ಟ್ವಿಟರ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಪ್ರಧಾನಿ, ದೇಶದ ಪ್ರತಿ ಬಡ ಕುಟುಂಬಕ್ಕೆ ಪಕ್ಕಾ ಮನೆಯನ್ನು ಒದಗಿಸುವ ನಮ್ಮ ಸಂಕಲ್ಪದಲ್ಲಿ ನಾವು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ್ದೇವೆ. ಭಾರತೀಯರ ಸಹಕಾರದಿಂದ ಮಾತ್ರ ಮೂರು ಕೋಟಿಗೂ ಹೆಚ್ಚು ನಿರ್ಮಿಸಲು ಸಾಧ್ಯವಾಗಿದೆ. ಮೂಲ ಸೌಕರ್ಯಗಳಿರುವ ಈ ಮನೆಗಳು ಇಂದು ಮಹಿಳಾ ಸಬಲೀಕರಣದ ಸಂಕೇತವಾಗಿ ಮಾರ್ಪಟ್ಟಿವೆ ಎಂದು ತಿಳಿಸಿದ್ದಾರೆ.
2015 ರಲ್ಲಿ ಪ್ರಾರಂಭವಾದ, ಪ್ರಧಾನ ಮಂತ್ರಿ ಆವಾಸ್ ಯೋಜನೆ(ಗ್ರಾಮೀಣ), ದೇಶದ ಬಡ ಜನಸಂಖ್ಯೆಗೆ ‘ಪಕ್ಕಾ’ ಮನೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. 31 ಮಾರ್ಚ್ 2022 ರೊಳಗೆ 2 ಕೋಟಿ ಕೈಗೆಟುಕುವ ಮನೆಗಳನ್ನು ನಿರ್ಮಿಸುವ ಗುರಿಯೊಂದಿಗೆ ಯೋಜನೆ ಪ್ರಾರಂಭಿಸಲಾಗಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆ (ಗ್ರಾಮೀಣ) ಅಡಿಯಲ್ಲಿ 2.52 ಕೋಟಿ ಮನೆಗಳ ನಿರ್ಮಾಣ ಪೂರ್ಣಗೊಂಡಿದೆ. ಇದಕ್ಕಾಗಿ 1.95 ಲಕ್ಷ ಕೋಟಿ ರೂ. ವೆಚ್ಚ ಮಾಡಲಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ(ನಗರ) ಅಡಿಯಲ್ಲಿ ಇದುವರೆಗೆ 58 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ಇದಕ್ಕಾಗಿ 1.18 ಲಕ್ಷ ಕೋಟಿ ರೂ. ವೆಚ್ಚವಾಗಿದೆ.
ಪ್ರತಿ ಮನೆಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ, ನೀರಿನ ಸಂಪರ್ಕ ಮತ್ತು ವಿದ್ಯುತ್ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತದೆ. ಪ್ರಧಾನಮಂತ್ರಿ ಆವಾಸ್ ಯೋಜನಾ ಅರ್ಬನ್ ವೆಬ್‌ಸೈಟ್ ಪ್ರಕಾರ, ಕೇಂದ್ರದಿಂದ ಇದುವರೆಗೆ ಸುಮಾರು 122.69 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ.