ಗುವಾಹಟಿ: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ 100 ಪ್ರಯಾಣಿಕರನ್ನು ಸಾಗಿಸುತ್ತಿದ್ದ 2 ದೋಣಿಗಳು ಮುಖಾಮುಖಿ ಡಿಕ್ಕಿಯಾಗಿದ್ದು, ಅನೇಕರು ಕಣ್ಮರೆಯಾಗಿದ್ದಾರೆ.
ಗುವಾಹಟಿಯಿಂದ 350 ಕಿಮೀ ದೂರದಲ್ಲಿರುವ ಜೋರ್ಹತ್‌ನ ನಿಮತಿ ಘಾಟ್‌ನಲ್ಲಿ ಅವಘಡ ಸಂಭವಿಸಿದ್ದು, ಅಪಘಾತಕ್ಕೀಡಾದ ಬೋಟ್‌ಗಳಲ್ಲಿ ಕನಿಷ್ಠ 100 ಪ್ರಯಾಣಿಕರು ಇದ್ದರು.
ಬ್ರಹ್ಮಪುತ್ರಾ ನದಿಯಲ್ಲಿ ಎರಡು ಪ್ರಯಾಣಿಕರ ದೋಣಿಗಳು ಪರಸ್ಪರ ಡಿಕ್ಕಿ ಹೊಡೆದ ನಂತರ ಹಲವಾರು ಜನರು ನಾಪತ್ತೆಯಾಗಿದ್ದಾರೆ. ಒಂದು ದೋಣಿ ಒಳನಾಡು ಜಲ ಸಾರಿಗೆ ಇಲಾಖೆಯ ಸರ್ಕಾರಿ ಪ್ರಯಾಣಿಕರ ದೋಣಿಯಾಗಿದ್ದು, ಮಜುಲಿಯಿಂದ(ಬ್ರಹ್ಮಪುತ್ರ ನದಿಯ ನದಿ ದ್ವೀಪ) ನಿಮತಿ ಘಾಟ್‌ಗೆ ತೆರಳುತ್ತಿತ್ತು. ಇನ್ನೊಂದು ದೋಣಿ ವಿರುದ್ಧ ದಿಕ್ಕಿನಲ್ಲಿ ಹೋಗುತ್ತಿತ್ತು.
ಅಪಘಾತದ ನಂತರ ದೋಣಿ ಮಗುಚಿ ಬಿದ್ದಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೋಣಿ ಮಗುಚಿ ಬೀಳುವಾಗ ಕೆಲವು ಪ್ರಯಾಣಿಕರು ರಕ್ಷಿಸಿಕೊಳ್ಳಲು ನೀರಿಗೆ ಹಾರಿದ್ದಾರೆ.
ದೋಣಿಗಳಲ್ಲಿದ್ದ ಮೋಟಾರ್ ಬೈಕ್‌ಗಳು ಮತ್ತು ಕಾರುಗಳ ಜೊತೆಗೆ ಪ್ರಯಾಣಿಕರ ಲಗೇಜ್ ಕೂಡ ನದಿಯಲ್ಲಿ ಕೊಚ್ಚಿ ಹೋಗಿವೆ. ನಾಪತ್ತೆಯಾದವರಿಗಾಗಿ ಹುಡುಕಾಟ ನಡೆಸಲಾಗಿದೆ.
ಘಟನೆಯ ನಂತರ, ಅಸ್ಸಾಂ ಮುಖ್ಯಮಂತ್ರಿ ಡಾ.ಹಿಮಂತ್ ಬಿಸ್ವಾ ಅವರು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ ಮತ್ತು ಎಸ್‌ಡಿಆರ್‌ಎಫ್ ನೆರವಿನೊಂದಿಗೆ ತ್ವರಿತಗತಿಯಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಳ್ಳುವಂತೆ ಮಜುಲಿ ಮತ್ತು ಜೋರ್ಹತ್ ಜಿಲ್ಲೆಗಳ ಜಿಲ್ಲಾಡಳಿತದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯ ಸಚಿವ ಬಿಮಲ್ ಬೋರಾ ಅವರಿಗೆ ತಕ್ಷಣ ಮಜುಲಿಗೆ ತೆರಳಿ ಪರಿಸ್ಥಿತಿಯ ಅವಲೋಕನ ನಡೆಸುವಂತೆ ಸೂಚಿಸಿದ್ದು, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾಗೆ ಬೆಳವಣಿಗೆಗಳ ಮೇಲ್ವಿಚಾರಣೆ ಮಾಡುವಂತೆ ತಿಳಿಸಿದ್ದಾರೆ.
ನಿಮತಿ ಘಾಟ್, ಜೋರ್ಹತ್ ಬಳಿ ಸಂಭವಿಸಿದ ಭೀಕರ ದೋಣಿ ಅಪಘಾತ ನೋವು ತಂದಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ.