ಬೆಂಗಳೂರು: ರಾಜ್ಯದ ಜನಸಂಖ್ಯೆ 4 ಕೋಟಿಯಷ್ಟು ಇದ್ದಾಗ ಮಂಜೂರಾದ ಹುದ್ದೆಗಳಲ್ಲಿಯೇ ಸುಮಾರು 2.56 ಲಕ್ಷ ಹುದ್ದೆಗಳು ಖಾಲಿ ಇವೆ.
ಗೃಹ ಇಲಾಖೆ, ಕಂದಾಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಶಿಕ್ಷಣ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳು ಅನೇಕ ವರ್ಷಗಳಿಂದ ಖಾಲಿ ಇವೆ. ಆರ್ಥಿಕ ಇಲಾಖೆ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 41 ಇಲಾಖೆಗಳಿಂದ ಒಟ್ಟು 2,55,920 ಹುದ್ದೆಗಳು ಖಾಲಿ ಉಳಿದಿದ್ದು, ಜನಸಂಖ್ಯೆ ಮತ್ತು ಕಾರ್ಯಭಾರಕ್ಕೆ ಅನುಗುಣವಾಗಿ ಹೆಚ್ಚುವರಿ ಹುದ್ದೆಗಳು ಸೃಷ್ಟಿಯಾಗಿಲ್ಲ. ಮಂಜುರಾದ ಹುದ್ದೆಗಳಲ್ಲಿಯೇ ಐದಾರು ವರ್ಷಗಳಿಂದ ಇಳಿಕೆ ಮಾಡಲಾಗಿದ್ದು, ವರ್ಷದಿಂದ ವರ್ಷಕ್ಕೆ ಹುದ್ದೆಗಳನ್ನು ಕಡಿತಗೊಳಿಸಲಾಗಿದೆ. ಖಾಲಿ ಹುದ್ದೆಗಳನ್ನು ಭರ್ತಿ ಮಾಡದ ಕಾರಣ ಖಾಲಿ ಹುದ್ದೆಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ.
7,72.025 ಮಂಜೂರಾದ ಹುದ್ದೆಗಳಿದ್ದುಮ 2,55,920 ಖಾಲಿ ಹುದ್ದೆಗಳು ಇವೆ. ಶಿಕ್ಷಣ ಇಲಾಖೆಯಲ್ಲಿ 62,145, ಆರೋಗ್ಯ ಇಲಾಖೆಯಲ್ಲಿ 35,196, ಗೃಹ ಇಲಾಖೆಯಲ್ಲಿ 22,069, ಉನ್ನತ ಶಿಕ್ಷಣ ಇಲಾಖೆಯಲ್ಲಿ 13,013, ಕಂದಾಯ ಇಲಾಖೆಯಲ್ಲಿ 10,987, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 10,946, ಪಶು ಸಂಗೋಪನೆ ಇಲಾಖೆಯಲ್ಲಿ 10,393 ಹುದ್ದೆಗಳು ಖಾಲಿ ಇವೆ.
ಮಂಜೂರಾದ ಹುದ್ದೆಗಳಲ್ಲಿ 2018 ರಿಂದ ಇದುವರೆಗೆ ಶೇಕಡ 33ರಷ್ಟು ಹುದ್ದೆಗಳು ಖಾಲಿ ಇವೆ. ಈ ವರ್ಷ ನಿವೃತ್ತಿ ಬಳಿಕ ಮತ್ತಷ್ಟು ಹುದ್ದೆಗಳು ಖಾಲಿಯಾಗಲಿವೆ. ಕಡಿಮೆ ಸಂಖ್ಯೆಯ ನೌಕರರಿಗೆ ಕಾರ್ಯಭಾರ ಹೆಚ್ಚಾಗಿದೆ. ಒತ್ತಡಗಳಿಂದಲೇ ಕಾರ್ಯ ನಿರ್ವಹಿಸುವ ಅನಿವಾರ್ಯತೆ ಎದುರಾಗಿದ್ದು, ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಅಧಿಕಾರಿ ವರ್ಗದವರಿಗೆ, ನೌಕರರಿಗೆ ಒತ್ತಡದಲ್ಲಿಯೇ ಕೆಲಸ ಮಾಡುವ ಪರಿಸ್ಥಿತಿ ಎದುರಾಗಿದೆ.