ಮದುವೆ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಮಾಡಿದ್ದ ಎರಡೂವರೆ ಅಡಿ ಎತ್ತರದ ವ್ಯಕ್ತಿ ಅಜೀಮ್ ಮನ್ಸೂರಿಗೆ ಕೊನೆಗೂ ಮದುವೆಯಾಗ್ತಿದೆ. ಮನ್ಸೂರಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನ್ಸೂರಿಗೆ ಅನೇಕ ವರ್ಷಗಳಿಂದ ವಧು ಸಿಕ್ಕಿರಲಿಲ್ಲ. ಈ ಬಗ್ಗೆ ಪೊಲೀಸರಿಗೆ ಮನವಿ ಮಾಡಿದ್ದ ಮನ್ಸೂರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದರು.
ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾದ ಮನ್ಸೂರಿ, ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು 2019 ರ ಮೇ ತಿಂಗಳಲ್ಲಿ ಭೇಟಿಯಾಗಿ ಜೀವನ ಸಂಗಾತಿಯನ್ನು ಹುಡುಕಲು ಸಹಾಯ ಮಾಡುವಂತೆ ಕೇಳಿದ್ದರು. ಎಂಟು ತಿಂಗಳ ಹಿಂದೆ ಅವರು ಕೈರಾನಾದ ಸಬ್ ಡಿವಿಶನಲ್ ಮ್ಯಾಜಿಸ್ಟ್ರೇಟ್ ರಿಂದಲೂ ಸಹಾಯ ಕೇಳಿದ್ದರು. ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದರು. ಯಾವುದೇ ಉತ್ತರ ಸಿಗದಿದ್ದಾಗ ಕಳೆದ ತಿಂಗಳು ಪೊಲೀಸರನ್ನು ಸಂಪರ್ಕಿಸಿದ್ದರು.
ಮನ್ಸೂರಿ ವಿಡಿಯೋ ವೈರಲ್ ಆಗ್ತಿದ್ದಂತೆ ಪ್ರಸಿದ್ಧಿಗೆ ಬಂದಿದ್ದ ಮನ್ಸೂರಿ ಮದುವೆಯಾಗಲು ಅನೇಕರು ಮುಂದೆ ಬಂದಿದ್ದರು. ಈ ಎಲ್ಲ ಹುಡುಗಿಯರ ಪೈಕಿ ಮನ್ಸೂರಿ, ಉತ್ತರ ಪ್ರದೇಶದ ಹಾಪುರದಲ್ಲಿ ವಾಸಿಸುತ್ತಿರುವ ಬುಶ್ರಾ ಎಂಬ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ಬುಶ್ರಾ ಕೂಡ ಎರಡೂವರೆ ಅಡಿ ಉದ್ದವಿದ್ದು, ಇಬ್ಬರ ನಿಶ್ಚಿತಾರ್ಥ ನೆರವೇರಿದೆ. 20 ವರ್ಷದ ಬುಶ್ರಾ ವ್ಯಾಸಂಗ ಮಾಡ್ತಿದ್ದು, ಬಿ.ಕಾಂ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ. ವಿದ್ಯಾಭ್ಯಾಸ ಪೂರ್ಣಗೊಂಡ ನಂತ್ರ ಇಬ್ಬರ ಮದುವೆ ನೆರವೇರಲಿದೆ.