ಬೆಂಗಳೂರು: ಮಾವಿನ ಹಣ್ಣು ಪ್ರಿಯರಿಗೆ, ಖರೀದಿದಾರರಿಗೆ, ಮಾರಾಟಗಾರರಿಗೆ ಸಿಹಿ ಸುದ್ದಿ. ಕೊರೋನಾದಿಂದಾಗಿ ಎರಡು ವರ್ಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಮಾವಿನ ಮೇಳ ಆಯೋಜಿಸಲು ಕರ್ನಾಟಕ ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
ಎರಡು ವರ್ಷಗಳ ನಂತರ, ಕರ್ನಾಟಕ ತೋಟಗಾರಿಕೆ ಇಲಾಖೆಯು ಮೇ ಕೊನೆಯಲ್ಲಿ ಅಥವಾ ಜೂನ್ ಆರಂಭದಲ್ಲಿ ಲಾಲ್ಬಾಗ್ನಲ್ಲಿ ಮಾವಿನ ಮೇಳವನ್ನು ಆಯೋಜಿಸಲಿದೆ ಎಂದು ಪ್ರಧಾನ ಕಾರ್ಯದರ್ಶಿ (ತೋಟಗಾರಿಕೆ) ರಾಜೇಂದರ್ ಕುಮಾರ್ ಕಟಾರಿಯಾ ತಿಳಿಸಿದ್ದಾರೆ.
ಈ ವರ್ಷ ಅಲ್ಫೋನ್ಸೋ, ರಸಪುರಿ, ತೋತಾಪುರಿ, ಆಮ್ರಪಲ್ಲಿ ಮತ್ತು ಮಲ್ಲಿಕಾ ಸೇರಿದಂತೆ ಎಂಟರಿಂದ ಹತ್ತು ಬಗೆಯ ಮಾವುಗಳನ್ನು ಪ್ರದರ್ಶಿಸುವ ನಿರೀಕ್ಷೆಯಿದೆ. ಜೂನ್ ತಿಂಗಳ ಮೊದಲ ಅಥವಾ ಎರಡನೇ ವಾರದಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕಿನಲ್ಲಿ ಮಾವಿನ ಮೇಳವನ್ನು ಆಯೋಜಿಸಲಾಗುತ್ತಿದೆ. ಜನರಿಂದ ಉತ್ತಮ ಸ್ಪಂದನೆ ಸಿಗಬಹುದೆಂಬ ನಿರೀಕ್ಷೆ ಇದೆ. ಮೇ ತಿಂಗಳ ಎರಡನೇ ವಾರದಲ್ಲಿ ಜಿಲ್ಲಾವಾರು ಮಾವಿನ ಮೇಳ ನಡೆಯಲಿದೆ ಎಂದು ತಿಳಿಸಿದರು.
ಈ ಮೇಳವು ರೈತರು ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನವನ್ನು ತಲುಪಿಸಲು ಸಹಾಯ ಮಾಡಲಿದೆ ಮತ್ತು ಗ್ರಾಹಕರು ನೈಸರ್ಗಿಕದತ್ತವಾದ, ತಾಜಾ ಹಣ್ಣುಗಳನ್ನು ಇಲ್ಲಿ ಪಡೆದುಕೊಳ್ಳಬಹುದು. ಮಣ್ಣಿನಲ್ಲಿ ತೇವಾಂಶ ಹೆಚ್ಚಿದ ಪರಿಣಾಮ ಮಾವಿನ ಹೂವುಗಳು ಉತ್ತಮವಾಗಿ ಬಾರದ ಕಾರಣ ಈ ವರ್ಷ ರಾಜ್ಯವು ಮಾವಿನ ಉತ್ಪಾದನೆ ಕುಸಿತ ಕಂಡಿರುವ ಸಮಯದಲ್ಲಿ ಮೇಳ ಬಂದಿದೆ ಎಂದು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.