ಪ್ರಸ್ತುತ ನಿರುದ್ಯೋಗ ಸಮಸ್ಯೆಯನ್ನು ಪ್ರಮುಖ ವಿಷಯವೆಂದು ಪರಿಗಣಿಸಲಾಗಿದೆ. ನಿರುದ್ಯೋಗ ಎಷ್ಟರಮಟ್ಟಿಗೆ ಹೆಚ್ಚಿದೆಯೆಂದರೆ ಉದ್ಯೋಗ ಮತ್ತು ಹಣಕ್ಕಾಗಿ ಜನರು ಯಾವುದೇ ಕೆಲಸವನ್ನು ಮಾಡಲು ಸಿದ್ಧರಾಗಿದ್ದಾರೆ. ಆದರೆ ಚೀನಾದಲ್ಲಿ ಪರಿಸ್ಥಿತಿ ಹಾಗಿಲ್ಲ. ಉಚಿತ ಊಟ, ವಸತಿ, ಜೊತೆಗೆ 2 ಕೋಟಿ ರೂಪಾಯಿ ಸಂಬಳ ಕೊಟ್ಟರೂ ಆ ಉದ್ಯೋಗವನ್ನು ಮಾಡಲು ಅಲ್ಲಿನ ಜನರು ಸಿದ್ಧರಿಲ್ಲ. ಇಷ್ಟು ಒಳ್ಳೆಯ ಪ್ಯಾಕೇಜ್ ಇದ್ದರೂ ಯಾರೂ ಈ ಕೆಲಸ ಮಾಡಲು ಬಯಸದೇ ಇರುವುದೇಕೆ ಅನ್ನೋದೇ ಕುತೂಹಲಕಾರಿ ಸಂಗತಿ.
ಚೀನಾದ ಶಾಂಘೈ ನಗರದ ನಿವಾಸಿಯಾಗಿರೋ ಮಹಿಳೆ ತನಗಾಗಿ ವೈಯಕ್ತಿಕ ದಾದಿಯೊಬ್ಬಳ ಹುಡುಕಾಟದಲ್ಲಿದ್ದಾಳೆ. 24 ಗಂಟೆಗಳ ಕಾಲ ಅವಳೊಂದಿಗೆ ಇರಬೇಕು, ಆಕೆಗೆ ಸಂಬಂಧಪಟ್ಟ ಸಣ್ಣ ಪುಟ್ಟ ವಿಷಯವನ್ನೂ ನೋಡಿಕೊಳ್ಳಬೇಕು. ದಾದಿಗೆ ಪ್ರತಿ ತಿಂಗಳು ಹದಿನಾರು ಲಕ್ಷ ರೂಪಾಯಿಗೂ ಹೆಚ್ಚು ಸಂಬಳ ಕೊಡಲು ಮಹಿಳೆ ಸಿದ್ಧವಿದ್ದಾಳೆ. ಮಹಿಳೆ ಈ ಕೆಲಸಕ್ಕಾಗಿ ಜಾಹೀರಾತುಗಳನ್ನು ಸಹ ನೀಡಿದ್ದಾಳೆ. ಒಂದು ವರ್ಷಕ್ಕೆ 1.97 ಕೋಟಿ ನೀಡುವುದಾಗಿ ಜಾಹೀರಾತಿನಲ್ಲಿ ಹೇಳಲಾಗಿದೆ. ಇದರೊಂದಿಗೆ ಕೆಲವು ಷರತ್ತುಗಳನ್ನೂ ಆಕೆ ಹಾಕಿದ್ದಾಳೆ.
ಈ ಕೆಲಸಕ್ಕೆ ಅರ್ಜಿ ಸಲ್ಲಿಸುವವರ ಎತ್ತರ 165 ಸೆಂ.ಮೀಗಿಂತ ಹೆಚ್ಚಿರಬೇಕು. ತೂಕ 55 ಕೆಜಿಗಿಂತ ಕಡಿಮೆಯಿರಬೇಕು. ಆಕಾಂಕ್ಷಿಗಳು 12ನೇ ತರಗತಿ ಪಾಸಾಗಿರಬೇಕು. ನೋಡಲು ಸುಂದರವಾಗಿರಬೇಕು. ನೃತ್ಯ ಮತ್ತು ಹಾಡಲು ತಿಳಿದಿರಬೇಕು. ಜಾಹೀರಾತು ನೀಡಿದ ಮಹಿಳೆ ಈಗಾಗಲೇ ಇಬ್ಬರು ದಾದಿಯರನ್ನು ಕೆಲಸಕ್ಕಿಟ್ಟುಕೊಂಡಿದ್ದಾಳೆ. ಅವರಿಗೂ ಕೈತುಂಬಾ ಸಂಬಳ ಕೊಡುತ್ತಿದ್ದಾಳೆ.
ಮಾಲೀಕಳ ಚಪ್ಪಲಿ ಕಳಚುವುದರಿಂದ ಹಿಡಿದು ಎಲ್ಲಾ ಕೆಲಸವನ್ನೂ ದಾದಿಯರು ಮಾಡಬೇಕು. ಆಕೆ ಕೇಳಿದಾಗಲೆಲ್ಲ ಜ್ಯೂಸ್, ಹಣ್ಣು ಹೀಗೆ ಎಲ್ಲವನ್ನೂ ಪೂರೈಸಬೇಕು. ಮಹಿಳೆ ಬರುವ ಮುನ್ನವೇ ಗೇಟ್ ಬಳಿ ನಿಂತು ಆಕೆಗಾಗಿ ಕಾಯಬೇಕು. ಆಕೆಯ ಬಟ್ಟೆಯನ್ನು ದಾದಿಯರೇ ಬದಲಾಯಿಸಬೇಕು. ಹೀಗೆ ಸಾಕಷ್ಟು ಷರತ್ತುಗಳಿರುವುದರಿಂದ ಈ ಕೆಲಸ ಒಪ್ಪಿಕೊಳ್ಳಲು ಯಾರೂ ಸಿದ್ಧರಾಗುತ್ತಿಲ್ಲ.