ಎರಡು ಕೋಟಿ ರೂಪಾಯಿ ನಗದು ಹೊಂದಿದ್ದ ಯುವಕನೊಬ್ಬ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವ ವೇಳೆ ಸಿಕ್ಕಿಬಿದ್ದಿದ್ದು, ಆತನ ಕೂಲಂಕುಶ ವಿಚಾರಣೆ ನಡೆಸಿದಾಗ ಅಕ್ರಮವಾಗಿ ಹಣ ಸಾಗಿಸುವ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಈ ಘಟನೆ ಮುಂಬೈನಿಂದ ಮಂಗಳೂರಿಗೆ ಹೋಗುತ್ತಿದ್ದ ರೈಲಿನಲ್ಲಿ ನಡೆದಿದ್ದು, ಟಿಟಿ ಟಿಕೆಟ್ ಪರಿಶೀಲಿಸುತ್ತಿದ್ದ ವೇಳೆ ಈತ ಅನುಮಾನಸ್ಪದವಾಗಿ ವರ್ತಿಸಿದ್ದಾನೆ. ಅಲ್ಲದೆ ಟಿಕೆಟ್ ಕೇಳಿದಾಗ ಆತ ತಡಬಡಾಯಿಸಿದ್ದಾನೆ. ಹೆಚ್ಚಿನ ಪರಿಶೀಲನೆ ನಡೆಸಿದಾಗ ಆತ ಟಿಕೆಟ್ ಇಲ್ಲದೆ ದೊಡ್ಡ ಬಾಕ್ಸ್ ನೊಂದಿಗೆ ಪ್ರಯಾಣಿಸುತ್ತಿರುವುದು ಗಮನಕ್ಕೆ ಬಂದಿದೆ.
ಕಾರವಾರದ ಶಿರವಾಡ ರೈಲು ನಿಲ್ದಾಣದಲ್ಲಿ ಆತನನ್ನು ವಶಕ್ಕೆ ಪಡೆದ ರೈಲ್ವೆ ಪೊಲೀಸರು ಯುವಕ ತಂದಿದ್ದ ಬಾಕ್ಸ್ ಪರಿಶೀಲನೆ ನಡೆಸಿದ ವೇಳೆ ಅದರಲ್ಲಿ ಬರೋಬ್ಬರಿ 2 ಕೋಟಿ ರೂಪಾಯಿ ಇರುವುದು ಪತ್ತೆಯಾಗಿದೆ. ಟಿಕೆಟ್ ರಹಿತ ಪ್ರಯಾಣಕ್ಕಾಗಿ ಯುವಕನಿಗೆ 1,060 ರೂಪಾಯಿ ದಂಡ ವಿಧಿಸಿದ ರೈಲ್ವೆ ಪೊಲೀಸರು ಬಳಿಕ ಆತನನ್ನು ಕಾರವಾರ ಗ್ರಾಮೀಣ ಠಾಣೆ ಪೊಲೀಸರಿಗೆ ಹಣದ ಸಮೇತ ಹಸ್ತಾಂತರಿಸಿದ್ದಾರೆ.
ಬಂಧಿತ ಯುವಕ ರಾಜಸ್ಥಾನದ ಸೊಂತ್ರಿಯ ಚೇನ್ ಸಿಂಗ್ ಎಂದು ಹೇಳಲಾಗಿದ್ದು, ವಿಚಾರಣೆ ವೇಳೆ ತಾನು ಮುಂಬೈನ ಭರತ್ ಎಂಬವರ ಬಳಿ ಕೆಲಸ ಮಾಡುತ್ತಿದ್ದು, ಈ ಹಣವನ್ನು ಮಂಗಳೂರಿನ ರಾಜು ಎಂಬವರಿಗೆ ತಲುಪಿಸಬೇಕಿತ್ತು. ಇದಕ್ಕೆ ನನಗೆ 15000 ರೂಪಾಯಿ ನೀಡುತ್ತಾರೆ ಎಂದು ತಿಳಿಸಿದ್ದಾನೆ.