ಟೀಂ ಇಂಡಿಯಾ ಮಾಜಿ ಆಟಗಾರ ಹಾಗೂ 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶ್ಪಾಲ್ ಶರ್ಮಾ ಹೃದಯಾಘಾತದಿಂದ ನಿಧನರಾಗಿದ್ದಾರೆ. 70 ಹಾಗೂ 80ರ ದಶಕದಲ್ಲಿ ಕ್ರಿಕೆಟ್ ಜೀವನದಲ್ಲಿ ಮಿಂಚಿದ್ದ ಯಶ್ಪಾಲ್ ಶರ್ಮಾಗೆ 66 ವರ್ಷ ವಯಸ್ಸಾಗಿತ್ತು.
ಆಗಸ್ಟ್ 11, 1954ರಲ್ಲಿ ಲೂಧಿಯಾನಾದಲ್ಲಿ ಜನಿಸಿದ್ದ ಪಂಜಾಬಿ ಕ್ರಿಕೆಟಿಗ ಯಶ್ಪಾಲ್ ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಆಗಿದ್ದರು. 1979ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದ ಮೂಲಕ ಟೆಸ್ಟ್ ಅಂಗಳಕ್ಕೆ ಪಾದಾರ್ಪಣೆ ಮಾಡಿದ್ದ ಯಶ್ಪಾಲ್ 37 ಪಂದ್ಯಗಳನ್ನ ಆಡಿದ್ದಾರೆ. ಟೆಸ್ಟ್ ಜೀವನದಲ್ಲಿ ಯಶ್ಪಾಲ್ ಎರಡು ಶತಕ ಹಾಗೂ 9 ಅರ್ಧಶತಕಗಳು ಸೇರಿದಂತೆ ಒಟ್ಟು 1606 ರನ್ಗಳನ್ನ ಗಳಿಸಿದ್ದರು.
66 ವರ್ಷದ ಯಶ್ಪಾಲ್ ಶರ್ಮಾ ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಪುತ್ರನನ್ನ ಅಗಲಿದ್ದಾರೆ. ಖ್ಯಾತ ಕ್ರಿಕೆಟಿಗನ ನಿಧನಕ್ಕೆ ಟೀಂ ಇಂಡಿಯಾ ಮಾಜಿ ನಾಯಕ ದಿಲೀಪ್ ವೆಂಗಾಸ್ಕರ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ.
ಈ ಸುದ್ದಿಯನ್ನ ನನಗೆ ನಂಬಲು ಸಾಧ್ಯವಾಗುತ್ತಿಲ್ಲ. ನಮ್ಮೆಲ್ಲರಲ್ಲಿ ಆತನೇ ಫಿಟ್ನೆಸ್ ಕಾಯ್ದುಕೊಳ್ಳೋದ್ರಲ್ಲಿ ಮುಂಚೂಣಿಯಲ್ಲಿದ್ದ. ಯಶಪಾಲ್ ಒಬ್ಬ ಸಸ್ಯಹಾರಿ. ಆತ ಆರೋಗ್ಯದ ಬಗ್ಗೆ ತುಂಬಾನೇ ಕಾಳಜಿ ವಹಿಸಿದ್ದ. ಮಧ್ಯಾಹ್ನದ ಊಟಕ್ಕೆ ಸೂಪ್ ಸೇವಿಸೋದು, ನಿಯಮಿತ ವಾಕಿಂಗ್ ಹೀಗೆ ಅಚ್ಚುಕಟ್ಟಾಗಿ ಜೀವನವನ್ನ ನಡೆಸುತ್ತಿದ್ದ. ಈ ಸುದ್ದಿಯನ್ನ ಕೇಳಿ ನನಗೆ ನಿಜಕ್ಕೂ ಆಘಾತವಾಗಿದೆ ಎಂದು ದಿಲೀಪ್ ವೆಂಗ್ಸರ್ಕಾರ್ ಹೇಳಿದ್ದಾರೆ.