ಬಾಗಲಕೋಟೆ: ವ್ಯಕ್ತಿಯ ಹೊಟ್ಟೆಯಲ್ಲಿದ್ದ 187 ನಾಣ್ಯಗಳನ್ನು ಶಸ್ತ್ರಚಿಕಿತ್ಸೆ ಮೂಲಕ ವೈದ್ಯರೂ ಹೊರಗೆ ತೆಗೆದಿದ್ದಾರೆ.
ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ದ್ಯಾಮಪ್ಪ ಎಂಬುವರು 187 ನಾಣ್ಯಗಳನ್ನು ನುಂಗಿದ್ದು, ಬಾಗಲಕೋಟೆಯ ಕುಮಾರೇಶ್ವರ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಮೂಲಕ ಹೊಟ್ಟೆಯಲ್ಲಿದ್ದ ನಾಣ್ಯಗಳನ್ನು ಹೊರಗೆ ತೆಗೆದಿದ್ದಾರೆ. ಮಾನಸಿಕ ಅಸ್ವಸ್ಥತೆಯಿಂದ ಅವರು ನಾಣ್ಯಗಳನ್ನು ನುಂಗಿರಬಹುದು ಎಂದು ವೈದ್ಯರು ತಿಳಿಸಿದ್ದಾರೆ.
ಐದು ರೂಪಾಯಿಯ 56, ಎರಡು ರೂಪಾಯಿ 51 ನಾಣ್ಯಗಳು ಹಾಗೂ ಒಂದು ರೂಪಾಯಿಯ 80 ನಾಣ್ಯಗಳು ಸೇರಿದಂತೆ 187 ನಾಣ್ಯಗಳನ್ನು ದ್ಯಾಮಪ್ಪ ನುಂಗಿದ್ದರು. ಈ ನಾಣ್ಯಗಳ ತೂಕವೇ ಒಂದೂವರೆ ಕೆಜಿಯಷ್ಟು ಇದೆ.
ಹೊಟ್ಟೆ ನೋವು ಎಂದು ಕುಟುಂಬದವರ ಬಳಿ ದ್ಯಾಮಪ್ಪ ತಿಳಿಸಿದ್ದು, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದೆ. ಆಸ್ಪತ್ರೆಯ ವೈದ್ಯರು ಎಕ್ಸರೇ ಮಾಡಿ ಪರೀಕ್ಷಿಸಿದಾಗ ನಾಣ್ಯಗಳು ಕಂಡುಬಂದಿವೆ. ಕೂಡಲೇ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ವಿಭಾಗದ ತಜ್ಞವೈದ್ಯರಾದ ಡಾ. ಈಶ್ವರ ಕಲಬುರ್ಗಿ, ಡಾ. ಪ್ರಕಾಶ ಕಟ್ಟಿಮನಿ, ಡಾ. ಅರ್ಚನಾ, ಡಾ. ರೂಪಾ ಹುಲಕುಂದೆ ಅವರ ತಜ್ಞ ವೈದ್ಯರ ತಂಡ ಎಂಡೋಸ್ಕೋಪಿ ಮೂಲಕ ನಾಣ್ಯಗಳನ್ನು ಹೊರ ತೆಗೆದು ದ್ಯಾಮಪ್ಪ ಅವರನ್ನು ಪ್ರಾಣಪಾಯದಿಂದ ಪಾರು ಮಾಡಿದ್ದಾರೆ.