
ಬೆಂಗಳೂರು: ಬಗರ್ ಹುಕುಂ ಯೋಜನೆಯಡಿ ಸಲ್ಲಿಕೆಯಾದ ನಮೂನೆ 53 ಮತ್ತು ನಮೂನೆ 57ರ ಅರ್ಜಿಗಳು ವಿಲೇವಾರಿಯಾಗದೇ ರೈತರ ಬೆಳೆ ನಾಶ ಮಾಡುವುದು ಅಥವಾ ಒಕ್ಕಲಿಬ್ಬಿಸುವ ಕ್ರಮಕ್ಕೆ ಮುಂದಾಗಬಾರದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಶೈಲೇಂದ್ರ ಬೆಲ್ದಾಳೆ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಅಂತಹ ಘಟನೆ ನಡೆದಲ್ಲಿ ಕೂಡಲೇ ನನ್ನ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಗರ್ ಹುಕುಂ ಯೋಜನೆಯಡಿ ಸಲ್ಲಿಕೆಯಾದ ಅರ್ಜಿಗಳು ಇತ್ಯರ್ಥವಾಗುವ ಮೊದಲು ಅರ್ಜಿದಾರರನ್ನು ಒಕ್ಕಲೆಬ್ಬಿಸಲು ಸಾಧ್ಯವಿಲ್ಲ. ಅಲ್ಲದೆ, ಅರ್ಜಿ ಹಾಕಿರುವ ಕಡೆ ರೈತರ ಬೆಳೆ ಕಟಾವು ಮಾಡಲು ಅಡ್ಡಿಪಡಿಸಬಾರದು ಎಂದು ಸ್ಪಷ್ಟವಾದ ಕಾನೂನು ರೂಪಿಸಲಾಗಿದೆ. ಬಗರ್ ಹುಕುಂಗೆ ಸಂಬಂಧಿಸಿದಂತೆ ಇಷ್ಟು ಸ್ಪಷ್ಟವಾಗಿ ಹಿಂದೆ ಯಾವತ್ತೂ ಸುತ್ತೋಲೆ ಹೊರಡಿಸಿರಲಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಬಗರಕುಂ ಯೋಜನೆಯಡಿ ಭೂ ಮಂಜೂರು ಮಾಡಲು ರಾಜ್ಯದಲ್ಲಿ 185 ಸಮಿತಿ ರಚಿಸಲಾಗಿದ್ದು, ಉಳಿದ ಸಮಿತಿಗಳನ್ನು ಕೂಡ ರಚಿಸಲಾಗುವುದು ಎಂದು ತಿಳಿಸಿದ್ದಾರೆ.