ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ಹದಿನೆಂಟು ಜನರು ತಮ್ಮ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ರಾಜಸ್ಥಾನದ ಅತಿದೊಡ್ಡ ಸರ್ಕಾರಿ ಆಸ್ಪತ್ರೆಯಾಗಿರುವ ಸವಾಯಿ ಮಾನ್ ಸಿಂಗ್ (ಎಸ್‌ಎಂಎಸ್) ನಲ್ಲಿ ನಡೆದಿದೆ.
ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ 18 ಮಂದಿ ದೃಷ್ಟಿ ಕಳೆದುಕೊಂಡಿರುವ ಆರೋಪ ಕೇಳಿಬಂದಿದೆ. ಇವರಲ್ಲಿ ಹೆಚ್ಚಿನವರಿಗೆ ರಾಜಸ್ಥಾನ ಸರ್ಕಾರದ ಚಿರಂಜೀವಿ ಆರೋಗ್ಯ ಯೋಜನೆಯಡಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ.
“ಜೂನ್ 23 ರಂದು ನನಗೆ ಆಪರೇಷನ್ ಆಗಿತ್ತು, ಜುಲೈ 5 ರವರೆಗೆ ನನಗೆ ದೃಷ್ಟಿ ಇತ್ತು, ಆದರೆ ಜುಲೈ 6-7 ರಿಂದ ನಾನು ದೃಷ್ಟಿ ಕಳೆದುಕೊಂಡೆ, ಮತ್ತೆ ಆಪರೇಷನ್ ಮಾಡಿದ ನಂತರವೂ ನನ್ನ ದೃಷ್ಟಿ ಹಿಂತಿರುಗಲಿಲ್ಲ” ಎಂದು ರೋಗಿಯೊಬ್ಬರು ಹೇಳಿದ್ದಾರೆ.
ಸೋಂಕಿನಿಂದಾಗಿ ದೃಷ್ಟಿ ಹೋಗಿದೆ, ಸೋಂಕನ್ನು ಗುಣಪಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ವೈದ್ಯರು ಹೇಳಿದ್ದಾರೆಂದು ರೋಗಿಗಳು ತಿಳಿಸಿದ್ದಾರೆ.
ಶಸ್ತ್ರಚಿಕಿತ್ಸೆಗೊಳಗಾದವರಿಗೆ ತೀವ್ರ ಕಣ್ಣಿನ ನೋವು ಶುರುವಾಗಿದೆ. ಆಗ ಆಸ್ಪತ್ರೆಯ ಅಧಿಕಾರಿಗಳು ರೋಗಿಗಳಿಗೆ ಮತ್ತೆ ದಾಖಲಾಗಿ ಇನ್ನೊಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗುವಂತೆ ಹೇಳಿದ್ದಾರೆ. ಕೆಲ ರೋಗಿಗಳು ಎರಡೆರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ರೂ ಮರಳಿ ದೃಷ್ಟಿ ಪಡೆಯಲು ಸಾಧ್ಯವಾಗಿಲ್ಲ.
ಆದರೆ ಆಸ್ಪತ್ರೆಯ ನೇತ್ರಶಾಸ್ತ್ರ ವಿಭಾಗದ ಅಧಿಕಾರಿಗಳು ತಮ್ಮ ಕಡೆಯಿಂದ ಯಾವುದೇ ಲೋಪವಾಗಿಲ್ಲ. ರೋಗಿಗಳಿಂದ ದೂರುಗಳನ್ನು ಸ್ವೀಕರಿಸಿದ ನಂತರ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.