ಇನ್ನೇನು 2022 ಮುಗಿದೇ ಹೋಯ್ತು. ಈ ವರ್ಷ ಕೆಲವರ ಪಾಲಿಗೆ ಸಿಹಿಯಾಗಿದ್ದರೆ ಇನ್ನು ಕೆಲವರಿಗೆ ಕಹಿಯನ್ನೇ ನೀಡಿದೆ. ಉದ್ಯೋಗಿಗಳ ವಿಚಾರಕ್ಕೆ ಬಂದರೆ ಅನೇಕರು ಸಂಬಳ ಹೆಚ್ಚಳ, ಬಡ್ತಿಯ ಖುಷಿ ಅನುಭವಿಸಿದ್ದಾರೆ. ಆದ್ರೆ ಸಾವಿರಾರು ಮಂದಿ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿರುವ ಏರಿಳಿತ ಭಾರತದ ಮೇಲೂ ಪರಿಣಾಮ ಬೀರಿದೆ. ಹಲವು ಖಾಸಗಿ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸಿವೆ.
ಸ್ಟಾರ್ಟಪ್‌ಗಳು ಕೂಡ ಉದ್ಯೋಗಿಗಳನ್ನು ವಜಾಗೊಳಿಸುವಲ್ಲಿ ಹಿಂದೆ ಬಿದ್ದಿಲ್ಲ. ಈ ವರ್ಷ ಭಾರತದಲ್ಲಿ ಹೊಸ ಸ್ಟಾರ್ಟಪ್‌ಗಳು 18,000 ಜನರನ್ನು ವಜಾಗೊಳಿಸಿವೆ. ಲಾಂಗ್‌ಹೌಸ್ ಕನ್ಸಲ್ಟಿಂಗ್ ಈ ಡೇಟಾವನ್ನು ಬಿಡುಗಡೆ ಮಾಡಿದೆ. ಅಂಕಿ-ಅಂಶಗಳ ಪ್ರಕಾರ 52 ಕಂಪನಿಗಳು ಸುಮಾರು 18,000 ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿವೆ. ಆರ್ಥಿಕ ಬಿಕ್ಕಟ್ಟಿನ ಕಾರಣ ಕೊಟ್ಟು ಸ್ಟಾರ್ಟ್ಅಪ್‌ಗಳು ನೌಕರರಿಗೆ ಬರೆ ಎಳೆದಿವೆ. ವೆಚ್ಚ ಕಡಿತಕ್ಕಾಗಿ ಉದ್ಯೋಗಿಗಳನ್ನು ವಜಾಗೊಳಿಸಿವೆ.
ಹೆಲ್ತ್ ಟೆಕ್, ಲಾಜಿಸ್ಟಿಕ್ಸ್, ಫಿನ್‌ಟೆಕ್, ಎಂಟರ್‌ಪ್ರೈಸ್ ಟೆಕ್, ಮೀಡಿಯಾ ಮತ್ತು ಎಂಟರ್‌ಟೈನ್‌ಮೆಂಟ್, ಎಡ್ಟೆಕ್, ಗ್ರಾಹಕ ಸೇವೆಗಳು, ಇ-ಕಾಮರ್ಸ್, ಅಗ್ರಿ-ಟೆಕ್ ಮತ್ತು ಕ್ಲೀನ್‌ಟೆಕ್‌ನಂತಹ ಅನೇಕ ವಲಯಗಳಲ್ಲಿ ಈ ಬೆಳವಣಿಗೆ ನಡೆದಿದೆ. ಈ ಬಾರಿ ದೊಡ್ಡ ಮಟ್ಟದಲ್ಲಿ ನೌಕರರ ಹಿಂಬಡ್ತಿ ನಡೆದಿದೆ. ಅನೇಕ ಕಂಪನಿಗಳು ಉದ್ಯೋಗಿಗಳಿಗೆ ಹೊಡೆತ ನೀಡಿವೆ.
ಇವುಗಳಲ್ಲಿ ಅನ್‌ಅಕಾಡೆಮಿ, ವೇದಾಂತು, ಬೈಜುಸ್ ಮತ್ತು ಬೈಜುಸ್ ಒಡೆತನದ ವೈಟ್‌ಹ್ಯಾಟ್ ಜೂನಿಯರ್, ಟಾಪರ್, ಇನ್ವೆಂಟ್ ಮೆಟಾವರ್ಸಿಟಿ, ಯೆಲ್ಲೋ ಕ್ಲಾಸ್, ಪ್ರಾಕ್ಟಿಕಲಿ, ಫ್ರಾಂಟೆರೋ, ಲಿಡೋ, ಟೀಚ್‌ಮಿಂಟ್, ಲೀಡ್, ಉದಯ್, ಕ್ರೇಜೊ, ಫನ್ ಮತ್ತು ಎರುಡಿಟಸ್ ಹೀಗೆ ಅನೇಕ ಕಂಪನಿಗಳು ಉದ್ಯೋಗಿಗಳನ್ನು ವಜಾ ಮಾಡಿವೆ. ಇದಲ್ಲದೇ ಸ್ವಿಗ್ಗಿ, ಓಲಾ, ಫ್ಲಿಪ್ ಕಾರ್ಟ್ ಸೇರಿದಂತೆ ಹಲವು ಕಂಪನಿಗಳು ಕೂಡ ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕಿವೆ.