ಗರ್ಭಪಾತಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿವಾಹಿತ ಹಾಗೂ ಅವಿವಾಹಿತ ಮಹಿಳೆಯರು ಸುರಕ್ಷಿತ ಗರ್ಭಪಾತಕ್ಕೆ ಬಯಸಿದಲ್ಲಿ ಅದಕ್ಕೆ ಅರ್ಹರು ಎಂದು ಹೇಳಿತ್ತು. ಇದೀಗ 18 ವರ್ಷದೊಳಗಿನ ಬಾಲಕಿಯರನ್ನೂ ವಿಶೇಷ ವರ್ಗ ಎಂದು ಪರಿಗಣಿಸಿ ಅವರಿಗೂ ಅವಕಾಶ ಕಲ್ಪಿಸಲಾಗಿದೆ.
ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಎ.ಎಸ್. ಬೋಪಣ್ಣ ಮತ್ತು ಜೆ.ಬಿ. ಪಾರ್ದೀವಾಲಾ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದ್ದು, ಲೈಂಗಿಕ ಕ್ರಿಯೆಯಿಂದ ಗರ್ಭ ಧರಿಸಬಹುದು ಎಂಬುದರ ಅರಿವು ಬಾಲಕಿಯರಿಗೆ ಇರುವುದಿಲ್ಲ ಹಾಗೂ ಗರ್ಭಧಾರಣೆಯ ಚಿಹ್ನೆಗಳನ್ನು ಅವರಿಗೆ ಗುರುತಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅವರನ್ನೂ ಸಹ ವೈದ್ಯಕೀಯ ಗರ್ಭಪಾತಕ್ಕೆ ಅರ್ಹರಾದ ಮಹಿಳೆಯರ ವರ್ಗಕ್ಕೆ ಸೇರಿಸಲಾಗಿದೆ ಎಂದು ತಿಳಿಸಿದೆ.
ಅಲ್ಲದೆ ಸಹಮತದ ಲೈಂಗಿಕ ಸಂಬಂಧದಿಂದ ಬಾಲಕಿಯರು ಗರ್ಭ ಧರಿಸಿದ ಸಂದರ್ಭದಲ್ಲಿ ಅವರು ವೈದ್ಯಕೀಯ ಗರ್ಭಪಾತ ಮಾಡಿಸಿಕೊಂಡ ವೇಳೆ ವೈದ್ಯರು ಅವರ ಗುರುತನ್ನು ಬಹಿರಂಗಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಸಹಮತದ ಲೈಂಗಿಕ ಸಂಬಂಧದ ಗರ್ಭಧಾರಣೆಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಸ್ಪಷ್ಟಪಡಿಸಿದೆ.