
ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಜೀನ್ಸ್ ಧರಿಸಿದ್ದೇ ಅಪ್ರಾಪ್ತೆಯನ್ನು ಸಂಕಷ್ಟಕ್ಕೆ ನೂಕಿದೆ. ಅಜ್ಜ ಹಾಗೂ ಚಿಕ್ಕಪ್ಪ, ಅಪ್ರಾಪ್ತೆಯನ್ನು ಹೊಡೆದು ಸಾಯಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು 10 ಮಂದಿಯನ್ನು ಬಂಧಿಸಿದ್ದಾರೆ.
ಮೃತ ಹುಡುಗಿ ವಯಸ್ಸು 17 ವರ್ಷ. ನೇಹಾ ಪಾಸ್ವಾನ್ ಹೆಸರಿನ ಹುಡುಗಿ ಜೀನ್ಸ್ ಧರಿಸಿದ್ದೇ ತಪ್ಪಾಗಿದೆ. ನೇಹಾ ತಾಯಿ ಶಕುಂತಲಾ ದೇವಿ, ಅಜ್ಜ, ಚಿಕ್ಕಪ್ಪ ಹಾಗೂ ಚಿಕ್ಕಮ್ಮನ ವಿರುದ್ಧ ದೂರು ಸಲ್ಲಿಸಿದ್ದಾಳೆ. ನೇಹಾ ಜೀನ್ಸ್ ಧರಿಸುವುದನ್ನು ಬಿಟ್ಟಿರಲಿಲ್ಲ. ಇದ್ರಿಂದ ಕೋಪಗೊಂಡ ಕುಟುಂಬಸ್ಥರು ಹೊಡೆದು ಕೊಂದಿದ್ದಾರೆ ಎಂದು ಆಕೆ ಹೇಳಿದ್ದಾಳೆ.
ಸೋಮವಾರ ಮನೆಯವರೆಲ್ಲ ಉಪವಾಸ ಮಾಡಿದ್ದರು. ನಂತ್ರ ಪೂಜೆ ಮಾಡಿದ್ದರು. ಪೂಜೆ ವೇಳೆ ನೇಹಾ ಜೀನ್ಸ್ ಧರಿಸಿದ್ದಳು. ಪೂಜೆ ನಂತ್ರ ಅಜ್ಜ , ಚಿಕ್ಕಪ್ಪ, ಚಿಕ್ಕಮ್ಮ ಜೀನ್ಸ್ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಧರಿಸಲೆಂದೇ ಜೀನ್ಸ್ ತಯಾರಿಸಲಾಗಿದೆ. ಹಾಗಾಗಿ ನಾನು ಜೀನ್ಸ್ ಧರಿಸುತ್ತೇನೆಂದು ನೇಹಾ ಹೇಳಿದ್ದಾರೆ. ಆದ್ರೆ ನೇಹಾ ಈ ಮಾತಿಗೆ ಕೋಪಗೊಂಡ ಮನೆಯವರು ಮನಸ್ಸಿಗೆ ಬಂದಂತೆ ಥಳಿಸಿದ್ದಾರೆ. ಸ್ಥಳದಲ್ಲಿಯೇ ನೇಹಾ ಸಾವನ್ನಪ್ಪಿದ್ದಾಳೆ. ಆದ್ರೆ ಆಸ್ಪತ್ರೆಗೆ ದಾಖಲಿಸುವ ನೆಪ ಮಾಡಿ ಆಟೋ ಏರಿದ್ದಾರೆ. ನೇಹಾ ತಾಯಿಗೆ ಮಗಳನ್ನು ಮುಟ್ಟಲು ಅವಕಾಶ ನೀಡಿರಲಿಲ್ಲವಂತೆ. ಮರುದಿನ ನದಿಯಲ್ಲಿ ನೇಹಾ ಶವ ಸಿಕ್ಕಿದೆ ಎಂದು ತಾಯಿ ಹೇಳಿದ್ದಾಳೆ.