
ಬಾಲಿವುಡ್‌ನ ಖ್ಯಾತ ನಟಿ ಪರ್ವೀನ್ ಬಾಬಿ ಸಾವನ್ನಪ್ಪಿ 17 ವರ್ಷಗಳೇ ಕಳೆದಿವೆ. ಆದ್ರೆ ಪರ್ವೀನ್ ಬಾಬಿ ವಾಸವಿದ್ದ ಮುಂಬೈ ನಿವಾಸಕ್ಕೆ ಇದುವರೆಗೂ ಬಾಡಿಗೆದಾರರು ಸಿಕ್ಕಿಲ್ಲ. ಮನೆಯನ್ನು ಮಾರಾಟ ಮಾಡಲು ಬ್ರೋಕರ್‌ಗಳು ಸಾಕಷ್ಟು ಪ್ರಯತ್ನಪಟ್ಟರೂ ಯಶಸ್ವಿಯಾಗಿಲ್ಲ.
ಮುಂಬೈನ ಜುಹುವಿನಲ್ಲಿರುವ ರಿವೆರಾ ಬಿಲ್ಡಿಂಗ್‌ನ 7ನೇ ಮಹಡಿಯಲ್ಲಿ ಪರ್ವೀನ್ ಬಾಬಿ ಮನೆಯಿದೆ. ಇದೊಂದು ಟೆರೆಸ್ ಫ್ಲಾಟ್. 15 ಕೋಟಿ ರೂಪಾಯಿಗೆ ಇದನ್ನು ಮಾರಾಟಕ್ಕಿಡಲಾಗಿದೆ. ಬಾಡಿಗೆಗೆ ತೆಗೆದುಕೊಳ್ಳಲು ಇಚ್ಛಿಸಿದ್ರೆ ಪ್ರತಿ ತಿಂಗಳು 4 ಲಕ್ಷ ರೂಪಾಯಿ ಕಟ್ಟಬೇಕು.
ಜಿತೇಂದ್ರ ಈ ಫ್ಲಾಟ್ ಮಾರಾಟದ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸಿದ್ದಾರೆ. ಹಾಗಾಗಿ ಅವರೇ ಇದರ ಮಾಲೀಕ ಅಂತಾನೂ ಹೇಳಲಾಗ್ತಿದೆ. ಮನೆಯ ಎದುರು ಇರುವ ನೇಮ್ ಪ್ಲೇಟ್‌ನಲ್ಲಿ ಮಾತ್ರ ಪರ್ವೀನ್ ಬಾಬಿ ಹೆಸರಿದೆ. ಪರ್ವೀನ್ ಬಾಬಿ ಚಾರಿಟೇಬಲ್ ಟ್ರಸ್ಟ್ ಅಂತಾನೂ ಬರೆಯಲಾಗಿದೆ.
2014ರಲ್ಲಿ ಅಗರ್ವಾಲ್ ಎಂಬಾತ ಪರ್ವೀನ್ ಬಾಬಿ ನಿವಾಸದಲ್ಲಿ ಬಾಡಿಗೆಗೆ ಇದ್ದ. ಆದ್ರೆ ಆತ ಮನೆಯನ್ನು ವಾಣಿಜ್ಯ ವಹಿವಾಟಿಗೆ ಬಳಸಿಕೊಳ್ತಿದ್ದಾನೆ ಅನ್ನೋ ಆರೋಪದ ಹಿನ್ನೆಲೆಯಲ್ಲಿ ಮನೆ ಖಾಲಿ ಮಾಡಬೇಕಾಗಿ ಬಂದಿತ್ತು.
ಪರ್ವೀನ್ ಬಾಬಿ 2005ರ ಜನವರಿ 20ರಂದು ಮೃತಪಟ್ಟಿದ್ದರು. ಸ್ಕ್ರಿಜೋಫ್ರೇನಿಯಾದಿಂದ ಬಳಲ್ತಾ ಇದ್ದ ಪರ್ವೀನ್ ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದರು. ಆಕೆಯದ್ದು ಸಹಜ ಸಾವು, ಆದ್ರೆ ಮೃತಪಟ್ಟು 4 ದಿನಗಳ ಬಳಿಕ ವಿಷಯ ಬೆಳಕಿಗೆ ಬಂದಿತ್ತು. ಹಾಗಾಗಿಯೇ ಜನರು ಈ ಮನೆಯನ್ನು ಖರೀದಿ ಮಾಡಲು ಹಿಂದೇಟು ಹಾಕ್ತಿದ್ದಾರಂತೆ.