ಬರೇಲಿ: ಉತ್ತರಪ್ರದೇಶದ ಅಮ್ರೋಹ ರೈಲು ನಿಲ್ದಾಣದ ಸಮೀಪ ಮನೆಯೊಂದರಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 16 ವರ್ಷದ ಬಾಲಕಿಯ ಮೇಲೆ ಎಂಟು ಮಂದಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಬಾಲಕಿಯ ಸೋದರ ಆರೋಪಿಗಳ ಕುಟುಂಬದ ಮಹಿಳೆಯೊಂದಿಗೆ ಪರಾರಿಯಾಗಿದ್ದರಿಂದ ಸೇಡು ತೀರಿಸಿಕೊಳ್ಳಲು ಪೋಷಕರ ಎದುರಲ್ಲೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಗಳ ಕುಟುಂಬದ ಮಹಿಳೆಯೊಂದಿಗೆ ಹುಡುಗಿಯ ಸಹೋದರ ಓಡಿ ಹೋಗಿದ್ದರಿಂದ ಅಸಮಾಧಾನಗೊಂಡಿದ್ದ ಅವರು ಇಬ್ಬರಿಗೂ ಹುಡುಕಾಟ ನಡೆಸಿದ್ದರು. ಜೂನ್ 28 ರಂದು ಪೋಷಕರೊಂದಿಗೆ ಬಾಲಕಿಯನ್ನು ಎಳೆದುಕೊಂಡು ಹೋಗಿದ್ದಾರೆ. ಪೋಷಕರ ಎದುರಲ್ಲೇ ಪರಾರಿಯಾಗಿದ್ದ ಮಹಿಳೆಯ ಸಹೋದರರು, ತಂದೆ ಮತ್ತು ಚಿಕ್ಕಪ್ಪಂದಿರು ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಆರೋಪಿಗಳಲ್ಲಿ ಒಬ್ಬ ಒಪ್ಪಿಗೆ ಇಲ್ಲದೆ ಅವಳನ್ನು ಮದುವೆಯಾಗಿದ್ದಾನೆ ಎಂದು ಬಾಲಕಿಯ ತಂದೆ ಆರೋಪಿಸಿದ್ದಾರೆ.
ಜೂನ್ 29 ರಂದು ಮನೆಯಿಂದ ಅವರನ್ನು ಹೊರಗೆ ಕಳುಹಿಸಿದ್ದು, ಪೊಲೀಸರಿಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ನಂತರ ಕುಟುಂಬದವರು ಪೊಲೀಸರನ್ನು ಸಂಪರ್ಕಿಸಿದರೂ ದೂರು ದಾಖಲಿಸಿರಲಿಲ್ಲ. ಬಾಲಕಿ ಹೇಳಿಕೆ ನೀಡಿದ ನಂತರ ಎಫ್ಐಆರ್ ದಾಖಲಿಸಲಾಗಿದೆ. ಆರೋಪಿಗಳು ಪ್ರಭಾವಿಗಳಾಗಿದ್ದು, ನಮ್ಮ ಕಟುಂಬದ ಬೇರೆ ಹುಡುಗಿಯರಿಗೂ ಇದೇ ರೀತಿ ಮಾಡಬಹುದೆಂಬ ಆತಂಕದಲ್ಲಿವೆ ಎಂದು ಬಾಲಕಿಯ ಚಿಕ್ಕಮ್ಮ ಹೇಳಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೊದಲಿಗೆ ಎರಡೂ ಕುಟುಂಬದವರೂ ಆತ್ಮೀಯರಾಗಿದ್ದರು. ಬಾಲಕಿಯ ಅಣ್ಣ ಅವರ ಕಟುಂಬದ ಮಹಿಳೆಯೊಂದಿಗೆ ಓಡಿ ಹೋದ ನಂತರ ಈ ಬೆಳವಣಿಗೆ ನಡೆದಿದೆ.