ಸರ್ಕಾರದಿಂದಲೇ ಭದ್ರತೆ ವ್ಯವಸ್ಥೆ ಇದ್ದರೂ ಸಹ ಬಿಹಾರ ರಾಜ್ಯ ಸರ್ಕಾರದ ಸಂಪುಟದಲ್ಲಿರುವ ಅನೇಕ ಸಚಿವರು ವಿವಿಧ ರೀತಿಯ ಶಸ್ತ್ರಾಸ್ತ್ರಗಳನ್ನು ಹೊಂದಿದ್ದಾರೆ. ಬಿಹಾರ ಸರ್ಕಾರದ 31 ಸಚಿವರ ಆಸ್ತಿ ವಿವರಗಳ ಸಲ್ಲಿಕೆ ವೇಳೆ, 16 ಸಚಿವರ ಬಳಿ ಗನ್, ಪಿಸ್ತೂಲ್ ಮತ್ತು ರೈಫಲ್‌ಗಳು ಇರುವುದು ಕಂಡುಬಂದಿದೆ.
ಸಾರ್ವಜನಿಕಗೊಳಿಸಲಾದ ಮಾಹಿತಿಯೊಂದರ ಪ್ರಕಾರ, ರಾಜ್ಯದ ಗಣಿ ಮತ್ತು ಭೂವಿಜ್ಞಾನ ಸಚಿವ ಜನಕ್ ರಾಮ್ ಬಳಿ 30.06 ಬೋರ್ ರೈಫಲ್ ಇದ್ದು, ಇದರ ಬೆಲೆ 1,25,000 ರೂಪಾಯಿಗಳಾಗಿವೆ. ಇದರೊಂದಿಗೆ 4,05,000 ರೂ. ಬೆಲೆಯ 0.32 ಬೋರ್‌ನ ಪಿಸ್ತೂಲ್ ಸಹ ಇವರ ಬಳಿ ಇದೆ.
ಇದೇ ರೀತಿ, ಪಂಚಾಯತ್ ರಾಜ್ ಸಚಿವ ಸಮರ್ಥ ಚೌಧರಿ ಬಳಿ 4,00,000 ರೂ. ಬೆಲೆ ಬಾಳುವ ರೈಫಲ್ ಇದೆ.
ನಿತೀಶ್ ಕುಮಾರ್‌ರ ಸಂಪುಟದಲ್ಲಿರುವ ಮೂವರು ಮಹಿಳಾ ಸಚಿವೆಯರ ಪೈಕಿ ಇಬ್ಬರ ಬಳಿ ಶಸ್ತ್ರಗಳಿವೆ. ಉಪಮುಖ್ಯಮಂತ್ರಿ ರೇಣು ದೇವಿ ಬಳಿ ಪಿಸ್ತೂಲ್ ಇದ್ದು, ಆಹಾರ ಮತ್ತು ಗ್ರಾಹಕ ರಕ್ಷಣಾ ಸಚಿವೆ ಲೇಸಿ ಸಿಂಗ್ ತಮ್ಮ ಬಳಿ ಡಬಲ್ ಬ್ಯಾರೆಲ್ ಗನ್ ಮತ್ತು ರೈಫಲ್ ಇರುವುದಾಗಿ ಬಹಿರಂಗಗೊಳಿಸಿದ್ದಾರೆ.
2011ರಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಚಾಲನೆ ಕೊಟ್ಟ ಸಂಪ್ರದಾಯವೊಂದರ ಪ್ರಕಾರ, ಸಂಪುಟದ ಎಲ್ಲಾ ಸಚಿವರು ವರ್ಷದ ಕೊನೆಯ ದಿನದಂದು ತಮ್ಮಲ್ಲಿರುವ ಆಸ್ತಿಯ ವಿವರಗಳನ್ನು ಬಹಿರಂಗಗೊಳಿಸಬೇಕು. ಅದರಂತೆ ಈ ವರ್ಷವೂ ಸಹ ಎಲ್ಲಾ ಸಚಿವರು ತಮ್ಮ ಬಳಿ ಇರುವ ಆಸ್ತಿಯ ವಿವರಗಳನ್ನು ಹಂಚಿಕೊಂಡಿದ್ದಾರೆ.