ಆಪಲ್ ಕಂಪನಿ 2007ರಲ್ಲಿ ತನ್ನ ಮೊದಲ ಐಫೋನ್ ಅನ್ನು ಬಿಡುಗಡೆ ಮಾಡಿತು. ಆ ಸಮಯದಲ್ಲೂ ಐಫೋನ್ ಸಾಕಷ್ಟು ಜನಪ್ರಿಯತೆ ಗಳಿಸಿತ್ತು. 2007ರಲ್ಲಿ ಮಹಿಳೆಯೊಬ್ಬಳಿಗೆ ಐಫೋನ್ ಉಡುಗೊರೆಯಾಗಿ ಬಂದಿತ್ತು. ಆಕೆ ಅದನ್ನು ಇದುವರೆಗೂ ಓಪನ್ ಮಾಡಿಯೇ ಇರಲಿಲ್ಲ. ಸೀಲ್ ಆಗಿಯೇ ಇರುವ ಹೊಚ್ಚ ಹೊಸ ಐಫೋನ್ ಅನ್ನು ಈಗ ಹರಾಜಿಗೆ ಇಡಲಾಗಿದೆ. 50,000 ಅಮೆರಿಕನ್ ಡಾಲರ್ ಅಂದಾಜು ಬೆಲೆಗೆ ಹರಾಜಿಗಿಡಲಾಗಿದ್ದು, ಭಾರತೀಯ ಕರೆನ್ಸಿಯಲ್ಲಿ ಬೆಲೆ ಸರಿಸುಮಾರು 41,29,370 ರೂಪಾಯಿ.
ಕರೆನ್ ಗ್ರೀನ್ ಎಂಬಾಕಿಗೆ ಸೇರಿದ ಐಫೋನ್ ಇದು. 2007ರಲ್ಲಿ ಕರೆನ್‌ಗೆ ಹೊಚ್ಚ ಹೊಸ ಐಫೋನ್ ಗಿಫ್ಟ್ ಆಗಿ ದೊರೆತಿತ್ತು. ಆಕೆಯ ಬಳಿ ಮೂರು ಫೋನ್ ಇದ್ದ ಕಾರಣ ಅದನ್ನು ಓಪನ್ ಕೂಡ ಮಾಡಿರಲಿಲ್ಲ. ಐಫೋನ್ 2019ರವರೆಗೂ ಶೆಲ್ಫ್‌ನಲ್ಲಿಯೇ ಇತ್ತು. ಅದನ್ನಾಕೆ ಮಾರಾಟ ಮಾಡಲು ನಿರ್ಧರಿಸಿದ್ದಳು. ಆದರೆ ಅದಕ್ಕೆ 5 ಸಾವಿರ ಡಾಲರ್‌ಗಿಂತ ಹೆಚ್ಚು ಬೆಲೆ ಸಿಗಲಿಲ್ಲ, ಹಾಗಾಗಿ ಅದನ್ನು ಮಾರುವ ನಿರ್ಧಾರವನ್ನು ಕೈಬಿಟ್ಟಿದ್ದಳು.
ಸುಮಾರು 16 ವರ್ಷಗಳ ಬಳಿಕ ಐಫೋನ್ ಅನ್ನು 50 ಸಾವಿರ ಡಾಲರ್‌ಗೆ ಮಾರಾಟ ಮಾಡಲು ಕರೆನ್ ರೆಡಿಯಾಗಿದ್ದಾಳೆ. ಹರಾಜಿನಿಂದ ಬಂದ ಹಣವನ್ನು ತನ್ನ ವ್ಯವಹಾರಕ್ಕೆ ಬಳಸಲು ಆಕೆ ಬಯಸ್ತಿದ್ದಾಳೆ. ಈ ಹರಾಜು ಫೆಬ್ರವರಿ 19 ರವರೆಗೆ ನಡೆಯಲಿದೆ. ಭಾರೀ ಮೊತ್ತಕ್ಕೆ ಹರಾಜಾಗುತ್ತಿರುವ ಮೊದಲ ಐಫೋನ್ ಇದಲ್ಲ. ಮೊದಲ ತಲೆಮಾರಿನ ಐಫೋನ್‌ಗಳನ್ನು ಪ್ರಸ್ತುತ 30 ರಿಂದ 50 ಸಾವಿರ ಡಾಲರ್‌ಗಳಿಗೆ ಮಾರಾಟ ಮಾಡಬಹುದು. ಇದುವರೆಗೂ ಬಳಸದ ಐಫೋನ್‌ಗಳೀಗ ಲಕ್ಷಾಂತರ ರೂಪಾಯಿ ಬೆಲೆಬಾಳುತ್ತವೆ. ಇವುಗಳಿಗೆ ಸಾಕಷ್ಟು ಬೇಡಿಕೆಯಿದೆ.