ತ್ರಿಶೂರ್: ಕೇರಳದ ತ್ರಿಶೂರ್‌ನ 15 ವರ್ಷದ ಬಾಲಕ ಆಸ್ಪತ್ರೆಯ ಆಂಬ್ಯುಲೆನ್ಸ್ ಅನ್ನು ಓಡಿಸಿ ಎಲ್ಲರಿಗೂ ಆಘಾತವನ್ನುಂಟು ಮಾಡಿರುವ ಘಟನೆ ನಡೆದಿದೆ.
ಜನನಿಬಿಡ ಪ್ರದೇಶದಲ್ಲಿ ಸುಮಾರು 8 ಕಿಲೋಮೀಟರ್ ಆಂಬ್ಯುಲೆನ್ಸ್ ಓಡಿಸಿ ಎಲ್ಲರನ್ನೂ ದಿಗ್ಭ್ರಮೆಗೊಳಿಸಿದ್ದಾನೆ. ಆಂಬ್ಯುಲೆನ್ಸ್ ತ್ರಿಶೂರ್ ಜಿಲ್ಲಾಸ್ಪತ್ರೆಗೆ ಸೇರಿದ್ದು, ವರದಿಗಳ ಪ್ರಕಾರ, ಬಾಲಕ ಆಸ್ಪತ್ರೆಯಲ್ಲಿನ ಉದ್ಯೋಗಿಯ ಮಗನಾಗಿದ್ದಾನೆ. ಜ್ವರಕ್ಕೆಂದು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದಾಗ ಈ ರೀತಿ ಮಾಡಿದ್ದಾನೆ.
ಹುಡುಗ ಎಲ್ಲರಿಗೂ ಪರಿಚಿತನಾಗಿದ್ದರಿಂದ, ಅವನು ಸುಲಭವಾಗಿ ತಿರುಗಾಡುತ್ತಿದ್ದನು. ಆಸ್ಪತ್ರೆ ಆವರಣದಲ್ಲಿ ಆಂಬ್ಯುಲೆನ್ಸ್ ನಿಲ್ಲಿಸಿದ್ದನ್ನು ನೋಡಿ ಒಳಗಿದ್ದ ಕೀಯನ್ನು ನೋಡಿ ಕೂಡಲೇ ವಾಹನ ಹತ್ತಿ ನುಗ್ಗಿದ್ದಾನೆ ಎನ್ನಲಾಗಿದೆ.
ವಾಹನ ಓಡಿಸುವ ಪರಿ ಕಂಡು ಮತ್ತು ಚಾಲಕ ಬಾಲಕ ಎನ್ನುವುದನ್ನು ತಿಳಿದ ಹಲವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತ್ರಿಶೂರ್ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಂಬ್ಯುಲೆನ್ಸ್‌ನ ನೋಂದಾಯಿತ ಚಾಲಕನಿಗೆ ಘಟನೆಯ ವಿವರಣೆಯನ್ನು ಕೇಳಲಾಗಿದೆ ಮತ್ತು ನೋಟಿಸ್ ನೀಡಲಾಗಿದೆ.