
ಮಹಾರಾಷ್ಟ್ರದ ಕಲ್ಯಾಣ್ ನಲ್ಲಿ 15 ವರ್ಷದ ಬಾಲಕ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುರುವಾರ ಮುಂಜಾನೆ ಕಲ್ಯಾಣ್ ರೈಲ್ವೆ ನಿಲ್ದಾಣದ ಬಳಿಯ ಕಲ್ಯಾಣಿ ಪಶ್ಚಿಮ ಪ್ರದೇಶದ ವಸತಿ ಸೊಸೈಟಿಯ ಆವರಣದಲ್ಲಿ ಒಂಬತ್ತು ವರ್ಷದ ಬಾಲಕಿಯ ಶವ ಪತ್ತೆಯಾದ ನಂತರ ಘಟನೆ ಬೆಳಕಿಗೆ ಬಂದಿದೆ.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ ನಂತರ ಹುಡುಗನನ್ನು ಗುರುತಿಸಿದ್ದಾರೆ. ಹುಡುಗನ ಪ್ರದೇಶದ ಕೆಲವರನ್ನು ವಿಚಾರಣೆ ಮಾಡಿದ ನಂತರ ಅವರು ಆತನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಮಹಾತ್ಮ ಫುಲೆ ಪೊಲೀಸ್ ಠಾಣೆಗೆ ಕರೆತಂದರು.
ಎರಡು ದಿನಗಳ ಹಿಂದೆ ಬಾಲಕಿಯ ತಂದೆಯೊಂದಿಗೆ ತನಗೆ ಜಗಳವಾಗಿದ್ದು, ಹಲ್ಲೆ ಮಾಡಿದ್ದರು ಎಂದು ಬಾಲಕ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾನೆ. ಹಲ್ಲೆಗೆ ಪ್ರತೀಕಾರ ತೀರಿಸಿಕೊಳ್ಳಲು ಬಾಲಕ ಬಾಲಕಿಯನ್ನು ಅಪಹರಿಸಿ, ಅತ್ಯಾಚಾರವೆಸಗಿ ನಂತರ ಬ್ಲೇಡ್‌ನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.
ಮಹಾತ್ಮ ಫುಲೆ ಪೊಲೀಸರು ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಾಲಕನನ್ನು ವೀಕ್ಷಣಾಲಯಕ್ಕೆ ಕಳುಹಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.